ಕುವೈತ್ ಕಾರ್ಮಿಕ ಮಸೂದೆ: ಭಾರತಕ್ಕೆ ಎಚ್ಚರಿಕೆ ಗಂಟೆ

Update: 2020-07-06 16:28 GMT
ಸಾಂದರ್ಭಿಕ ಚಿತ್ರ

ಕುವೈತ್, ಜು. 6: ಕುವೈತ್ ನಲ್ಲಿರುವ ವಿದೇಶಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದ ‘ಕರಡು ವಲಸಿಗ ಕೋಟಾ ಮಸೂದೆ’ಯೊಂದನ್ನು ದೇಶದ ಸಂಸತ್ತು ನ್ಯಾಶನಲ್ ಅಸೆಂಬ್ಲಿ ಅಂಗೀಕರಿಸಿದೆ. ಇದು ಜಾರಿಗೆ ಬಂದಾಗ ಕುವೈತ್  ನಲ್ಲಿರುವ ಭಾರತೀಯರ ಪೈಕಿ 8 ಲಕ್ಷದಷ್ಟು ಮಂದಿ ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಮರಳಲಿದ್ದಾರೆ.

ನ್ಯಾಶನಲ್ ಅಸೆಂಬ್ಲಿಯ ಕಾನೂನು ಮತ್ತು ಶಾಸನಾತ್ಮಕ ಸಮಿತಿಯು, ವಲಸಿಗ ಕೋಟ ಮಸೂದೆಯು ಸಾಂವಿಧಾನಿಕ ಎಂಬುದಾಗಿ ನಿರ್ಧರಿಸಿದೆ.

ಈ ಮಸೂದೆಯ ಪ್ರಕಾರ, ಭಾರತೀಯರು ದೇಶದ ಜನಸಂಖ್ಯೆಯ 15 ಶೇಕಡವನ್ನು ಮೀರಬಾರದು ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ. ಕುವೈತ್ ನಲ್ಲಿ ಈಗ 14.5 ಲಕ್ಷ ಭಾರತೀಯರಿದ್ದಾರೆ. ಕುವೈತ್ ನಲ್ಲಿ ಇತರ ಯಾವುದೇ ದೇಶಗಳ ಜನರಿಗಿಂತ ಭಾರತೀಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, 8 ಲಕ್ಷ ಭಾರತೀಯರು ಕುವೈತನ್ನು ತೊರೆಯಬೇಕಾಗಬಹುದು ಎಂದು ಪತ್ರಿಕೆ ಹೇಳಿದೆ.

ಕುವೈತ್ ನ ಪ್ರಸಕ್ತ ಜನಸಂಖ್ಯೆ 43 ಲಕ್ಷ. ಈ ಪೈಕಿ ಕುವೈತ್ ಪ್ರಜೆಗಳ ಸಂಖ್ಯೆ 13 ಲಕ್ಷ. ಅಲ್ಲಿ 30 ಲಕ್ಷ ಮಂದಿ ವಿದೇಶೀಯರೇ ಇದ್ದಾರೆ.

ತೈಲ ಬೆಲೆ ಕುಸಿತ ಮತ್ತು ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಕುವೈತ್ ನಲ್ಲಿ ವಲಸಿಗ ವಿರೋಧಿ ಭಾವನೆಗಳು ಬೆಳೆಯುತ್ತಿವೆ. ಕುವೈತ್ ನಲ್ಲಿರುವ ವಿದೇಶೀಯರ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂಬುದಾಗಿ ಸಂಸದರು ಮತ್ತು ಸರಕಾರಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಕಳೆದ ತಿಂಗಳು, ಕುವೈತ್ ಪ್ರಧಾನಿ ಶೇಖ್ ಸಬಾಹ್ ಅಲ್ ಖಾಲಿದ್ ಅಲ್ ಸಬಾಹ್, ವಿದೇಶೀಯರ ಸಂಖ್ಯೆಯನ್ನು ದೇಶದ ಜನಸಂಖ್ಯೆಯ 70 ಶೇಕಡದಿಂದ 30 ಶೇಕಡಕ್ಕೆ ಇಳಿಸುವ ಪ್ರಸ್ತಾಪವೊಂದನ್ನು ಮಂಡಿಸಿದ್ದರು.

ಭಾರತಕ್ಕೆ ಹಣ ಬರುವ ವಿದೇಶಗಳ ಪಟ್ಟಿಯಲ್ಲಿ ಕುವೈತ್ ಮೇಲಿನ ಸ್ಥಾನದಲ್ಲಿದೆ. 2018ರಲ್ಲಿ ಭಾರತಕ್ಕೆ ಕುವೈತ್ ನಿಂದ 4.8 ಬಿಲಿಯ ಡಾಲರ್ (ಸುಮಾರು 36,000 ಕೋಟಿ ರೂಪಾಯಿ) ಹಣ ಹರಿದು ಬಂದಿದೆ.

ನಮಗೆ ವೈದ್ಯರು, ಪರಿಣತ ಕೆಲಸಗಾರರು ಬೇಕು: ಕುವೈತ್ ಸಂಸತ್ ಸ್ಪೀಕರ್

ಕುವೈತ್ ನ ಜನಸಂಖ್ಯೆ ವ್ಯವಸ್ಥೆಯಲ್ಲಿ ಸಮಸ್ಯೆಯಿದೆ, ಇಲ್ಲಿನ ಜನಸಂಖ್ಯೆಯ 70 ಶೇಕಡ ವಲಸಿಗರಾಗಿದ್ದಾರೆ ಎಂದು ಅಸೆಂಬ್ಲಿ ಸ್ಪೀಕರ್ ಮರ್ಝೂಕ್ ಅಲ್-ಗಾನಿಮ್ ಕುವೈತ್ ಟಿವಿಗೆ ಹೇಳಿದ್ದಾರೆ. ಅದರಲ್ಲೂ ಹೆಚ್ಚು ಗಂಭೀರ ವಿಷಯವೆಂದರೆ, ದೇಶದಲ್ಲಿರುವ 33.5 ಲಕ್ಷ ವಲಸಿಗರ ಪೈಕಿ 13 ಲಕ್ಷ ಮಂದಿ ಒಂದೋ ಅನಕ್ಷರಸ್ಥರು ಅಥವಾ ಅವರಿಗೆ ಕೇವಲ ಓದಲು ಮತ್ತು ಬರೆಯಲು ಮಾತ್ರ ಗೊತ್ತು ಎಂದು ಅವರು ನುಡಿದರು. ಇಂಥ ಜನರು ಕುವೈತ್ ಗೆ ಬೇಕಾಗಿಲ್ಲ ಎಂದು ಅವರು ಹೇಳುತ್ತಾರೆ.

‘‘ನಾವು ವೈದ್ಯರನ್ನು ಮತ್ತು ಪರಿಣತ ಕೆಲಸಗಾರರನ್ನು ನೇಮಿಸಿಕೊಳ್ಳುವುದರಲ್ಲಿ ಅರ್ಥವಿದೆ, ಅಕೌಶಲ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲಾಗದು. ನಮ್ಮ ಜನಸಂಖ್ಯೆಯ ವೈರುಧ್ಯಕ್ಕೆ ಇದು ಕಾರಣವಾಗಿದೆ. ಈ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ವೀಸಾ ವ್ಯಾಪಾರಿಗಳ ಪಾತ್ರ ತುಂಬಾ ಇದೆ’’ ಎಂದು ಗಾನಿಮ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News