ಜನಪರ ಚಿಂತಕ ದಲಿತ್ ನಾಗರಾಜ್ ನಿಧನ

Update: 2020-07-06 16:35 GMT

ಬೆಂಗಳೂರು, ಜು. 6: ದಲಿತ ಫ್ಯಾಂಥರ್ಸ್ ಆಫ್ ಇಂಡಿಯಾ(ಡಿಪಿಐ) ಮತ್ತು ವಿಡುದಲೈ ಚಿರುತೆಗಳ್(ವಿಸಿಕೆ) ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಜನಪರ ಚಿಂತಕ ದಲಿತ್ ನಾಗರಾಜ್ (52) ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

ಪತ್ನಿ, ಇಬ್ಬರು ಮಕ್ಕಳು, ಅಪಾರ ಗೆಳೆಯರು, ಸಂಘಟನೆಯ ಕಾರ್ಯಕರ್ತರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. 1962ರ ಮಾರ್ಚ್ 10ರಂದು ಬೆಂಗಳೂರಿನಲ್ಲಿ ಹುಟ್ಟಿದ್ದ ನಾಗರಾಜ್, ಸುಮಾರು ಇಪ್ಪತ್ತು, ಇಪ್ಪತ್ತೈದು ವರ್ಷಗಳಿಂದ ದಲಿತ ಮತ್ತು ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು. ಸಂಸದ ತೋಳ್ ತಿರುಮಾವಳವನ್ ಅವರು ಸ್ಥಾಪಿಸಿದ್ದ ತಮಿಳುನಾಡು ಮೂಲದ ಡಿಪಿಐ-ವಿಸಿಕೆ ಸಂಘಟನೆಗಳ ರಾಜ್ಯಾಧ್ಯಕ್ಷರಾಗಿದ್ದ ನಾಗರಾಜ್, ರಾಜ್ಯದಲ್ಲಿ ಪ್ರಬಲವಾಗಿ ಎರಡೂ ಸಂಘಟನೆಗಳನ್ನು ರೂಪಿಸಿದ್ದರು.

ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ, ಕೊಳಚೆ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಶೋಷಣೆ ವಿರುದ್ಧದ ಹೋರಾಟಗಳಲ್ಲಿ ನಾಗರಾಜ್ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು. ಜನಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ದಲಿತ್ ನಾಗರಾಜ್ ಎಂದೇ ಚಿರಪರಿಚಿತರಾಗಿದ್ದ ಶ್ರೀಯುತರು, ಕೆಳದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ನಾಗರಾಜ್ ಅವರು ವಾಸವಾಗಿದ್ದ ಪರಪ್ಪನ ಅಗ್ರಹಾರ ಸಮೀಪದ ಸಿಂಗಸಂದ್ರದಲ್ಲಿ ನಾಳೆ(ಜು.7) ಮಧ್ಯಾಹ್ನ 12ಗಂಟೆಯ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ವಿಸಿಕೆ ಪ್ರಧಾನ ಕಾರ್ಯದರ್ಶಿಗಳಾದ ವಿ.ಮೂರ್ತಿ, ಶೇಖರ್ ಸೇರಿದಂತೆ ಅವರ ಒಡನಾಡಿಗಳು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News