ಬೆಂಗಳೂರು: 981 ಹೊಸ ಕೊರೋನ ಪ್ರಕರಣ ದೃಢ, ಸೋಂಕಿತರ ಸಂಖ್ಯೆ 10 ಸಾವಿರಕ್ಕೆ ಏರಿಕೆ

Update: 2020-07-06 16:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.6: ನಗರದಲ್ಲಿ ಸೋಮವಾರ 981 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 10 ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ.

ನಗರದಲ್ಲಿ ಸೋಂಕಿತರ ಸಂಖ್ಯೆ 10,561 ಏರಿಕೆಯಾಗಿದ್ದು, 278 ಮಂದಿ ಸೋಮವಾರ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 145 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಮಾ.8ರಿಂದ ಜೂ.30ರವರೆಗೆ 4,904 ಮಂದಿಗೆ ಸೋಂಕು ದೃಢಪಟ್ಟಿದ್ದು, ಜು.1ರಿಂದ ಸೋಮವಾರದವರೆಗೆ ಸುಮಾರು 6 ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ. ಸಮುದಾಯಕ್ಕೂ ಕೊರೋನ ಲಗ್ಗೆ ಇಟ್ಟ ಬಗ್ಗೆ ಆತಂಕ ವ್ಯಕ್ತವಾಗಿದೆ.

ಮೇ ತಿಂಗಳಲ್ಲಿ ಬೆರಳೆಣಿಕೆಯಷ್ಟಿದ್ದ ಕಂಟೈನ್ಮೆಂಟ್ ವಲಯ ಜೂನ್ ತಿಂಗಳಲ್ಲಿ ಮೂರಂಕಿಗೆ ಹೋಗಿದ್ದು, ಜುಲೈ ಆರಂಭದಲ್ಲಿಯೇ 1,500ಕ್ಕೂ ಅಧಿಕ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದ್ದು, ಎಲ್ಲೆಂದರಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದೆ.

ಮಹಿಳಾ ಆಯೋಗ ಕಚೇರಿ ಸೀಲ್‍ಡೌನ್

ರಾಜ್ಯ ಮಹಿಳಾ ಆಯೋಗ ಕಚೇರಿಯನ್ನು ತಾತ್ಕಾಲಿಕವಾಗಿ ಒಂದು ವಾರ ಸೀಲ್‍ಡೌನ್ ಮಾಡಲಾಗಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಮಹಿಳಾ ಆಯೋಗದ ಕಚೇರಿಯ ಅಕ್ಕಪಕ್ಕದ ಬಿಲ್ಡಿಂಗ್‍ನಲ್ಲಿ ಕೊರೋನ ಪ್ರಕರಣ ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸ್ ಮಾಡಿ ಮಹಿಳಾ ಆಯೋಗದ ಕಚೇರಿ ಸೀಲ್‍ಡೌನ್ ಮಾಡಲಾಗಿದೆ. ಇನ್ನು ಯಾವುದೇ ದೂರುಗಳು ಬಂದರೆ ಫೋನ್‍ನಲ್ಲಿ ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದೆ.

15 ಆಸ್ಪತ್ರೆ ಸುತ್ತಿದರೂ ಸಿಗದ ಚಿಕಿತ್ಸೆ: ಆರೋಪ

ನಗರದ 15 ಆಸ್ಪತ್ರೆಗಳಿಗೆ ಸುತ್ತಿದರೂ ಚಿಕಿತ್ಸೆ ಸಿಗದೆ ವೃದ್ಧೆ ಮೃತಪಟ್ಟಿರುವ ಘಟನೆ ನಡೆದಿದೆ ಎನ್ನಲಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಗೆ ಚಿಕಿತ್ಸೆ ಕೊಡಿಸಲು ವೃದ್ಧ ಪತಿ ಎರಡು ದಿನಗಳಿಂದ ಸುಮಾರು 15 ಆಸ್ಪತ್ರೆಗಳಿಗೆ ಸುತ್ತಾಡಿದ್ದಾರೆ. ಆದರೆ ಕೊನೆಗೂ ಚಿಕಿತ್ಸೆ ಸಿಗದೆ ಬಿಳೇಕಹಳ್ಳಿಯ 64 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಿಮ್ಹಾನ್ಸ್ ನ 30 ಮಂದಿಗೆ ಸೋಂಕು

ನಿಮ್ಹಾನ್ಸ್ ಆಸ್ಪತ್ರೆಯ ಆಂಬುಲೆನ್ಸ್ ಡ್ರೈವರ್ ಹಾಗೂ 30 ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು, ಸ್ಟಾಫ್ ನರ್ಸ್, ಚಾಲಕ ಹಾಗೂ ಸಿಬ್ಬಂದಿಗೆ ಕೊರೋನ ತಗಲಿದೆ.

ಸುಮಾರು 30 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಕೊರೋನ ಪಾಸಿಟಿವ್ ಆಗಿದ್ದ ವ್ಯಕ್ತಿಗಳನ್ನು ಕೆಲ ಸಿಬ್ಬಂದಿ ಐಸೊಲೇಷನ್ ಮಾಡಿದ್ದರು. ಹೀಗಾಗಿ ಅವರಿಗೂ ಸೋಂಕು ತಗುಲಿದೆ. ಆಂಬುಲೆನ್ಸ್ ಡ್ರೈವರ್ ಮತ್ತು ಸಿಬ್ಬಂದಿ ಭೈರಸಂದ್ರದಲ್ಲಿರುವ ಕ್ವಾಟ್ರರ್ಸ್‍ನಲ್ಲಿ ವಾಸವಾಗಿದ್ದು, ಇದೀಗ ಕ್ವಾಟ್ರರ್ಸ್ ನಿವಾಸಿಗಳಿಗೂ ಆತಂಕ ಎದುರಾಗಿದೆ. ಆಂಬುಲೆನ್ಸ್ ಚಾಲಕ, ಮತ್ತೊಬ್ಬರಿಗೆ ಸೋಂಕು ತಗಲಿದ್ದರೂ ಕ್ವಾಟ್ರರ್ಸ್ ಸೀಲ್‍ಡೌನ್ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿದ್ವಾಯಿ ಕಾಡುತ್ತಿರುವ ಕೊರೋನ

ನಗರದ ಕಿದ್ವಾಯಿ ಆಸ್ಪತ್ರೆಯ 20 ರೋಗಿಗಳು ಹಾಗೂ 10 ಪಿಜಿ ವಿದ್ಯಾರ್ಥಿಗಳಿಗೂ ಕೊರೋನ ಸೋಂಕು ದೃಢವಾಗಿದೆ. ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 60 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಕಿದ್ವಾಯಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಬಂದ್ ಮಾಡಲಾಗಿದ್ದು, ಶುಕ್ರವಾರದವರೆಗೆ ತುರ್ತು ಸೇವೆಗಳು ಮಾತ್ರ ಲಭ್ಯವಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News