ಬೆಂಗಳೂರು: 44 ವೈದ್ಯರಿದ್ದ ಆಸ್ಪತ್ರೆಯಲ್ಲಿ ಈಗ ಕೇವಲ 5 ವೈದ್ಯರು!

Update: 2020-07-06 16:55 GMT

ಬೆಂಗಳೂರು: ಬೆಂಗಳೂರಿನ ಹಲವು ಖಾಸಗಿ ಆಸ್ಪತ್ರೆಗಳು ಕೋವಿಡ್-19 ಸಮಸ್ಯೆಯ ನಡುವೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ ಹಾಗೂ ಈ ವಿಚಾರವನ್ನು ಸರಕಾರದ ಜತೆಗಿನ ಸಭೆಯಲ್ಲಿ ಉಪಮುಖ್ಯಮಂತ್ರಿಯ ಗಮನಕ್ಕೆ ತರಲಾಗಿದೆ ಎಂದು  ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳ ಸಂಘದ ಅಧ್ಯಕ್ಷ ಡಾ ಆರ್ ರವೀಂದ್ರ ಹೇಳಿದ್ದಾರೆ.

ನಗರದ ಶಿವಾಜಿನಗರದಲ್ಲಿರುವ ಎಚ್‍ ಬಿಎಸ್ ಆಸ್ಪತ್ರೆಯಲ್ಲಿ ಈ ಹಿಂದೆ 44 ವೈದ್ಯರು ಹಾಗೂ 20 ದಾದಿಯರು ಸೇವೆ ಸಲ್ಲಿಸುತ್ತಿದ್ದರೆ ಈಗ ಕೇವಲ 5 ವೈದ್ಯರು ಹಾಗೂ 12 ದಾದಿಯರ ಜತೆ ಅದು ಕರ್ತವ್ಯ ನಿರ್ವಹಿಸುವಂತಾಗಿ ಕೋವಿಡ್-19 ರೋಗಿಗಳ ಆರೈಕೆಗೆ ಸಮಸ್ಯೆ ಎದುರಿಸುತ್ತಿದೆ.

“ವೈದ್ಯರು ಎಲ್ಲಿದ್ದಾರೆ? ಎಲ್ಲರೂ ವಾಟ್ಸ್ಯಾಪ್‍ ನಲ್ಲಿದ್ದಾರೆ. ಎಲ್ಲಾ ವೈದ್ಯರೂ ಬಂದು ತಮ್ಮ ಕರ್ತವ್ಯ ನಿಭಾಯಿಸಬೇಕೆಂದು ಕೇಳಿಕೊಳ್ಳುತ್ತೇನೆ'' ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ತಾಹಾ ಮತೀನ್ ಅವರು ಐಸಿಯುವಿನಿಂದ ಮಾಡಲಾದ ವೀಡಿಯೋ ಮನವಿಯಲ್ಲಿ ತಿಳಿಸಿದ್ದು ಅವರ ಮನವಿಯನ್ನು ರವಿವಾರ ವಾಟ್ಸ್ಯಾಪ್, ಟ್ವಿಟರ್ ಹಾಗೂ ಇನ್‍ ಸ್ಟಾಗ್ರಾಂನಲ್ಲಿ ಅಪ್‍ ಲೋಡ್ ಮಾಡಲಾಗಿದೆ.

ಐಸಿಯುವಿನಲ್ಲಿರುವ ರೋಗಿಗಳ ಆರೈಕೆಗೆ ಆಸ್ಪತ್ರೆ ಹರಸಾಹಸ ಪಡುತ್ತಿದೆ. ಶ್ವಾಸಕೋಶದ ತೀವ್ರ ಸೋಂಕಿಗೆ ಒಳಗಾಗಿರುವ ಎಂಟು ರೋಗಿಗಳು ಆಸ್ಪತ್ರೆಯಲ್ಲಿದ್ದು ಅವರೆಲ್ಲರ ಕೋವಿಡ್ ವರದಿಗಾಗಿ ಕಾಯಲಾಗುತ್ತಿದೆ. ಈ 80 ಬೆಡ್ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಾಮರ್ಥ್ಯವಿದ್ದರೂ ಕೇವಲ ಐದು ವೈದ್ಯರಿರುವುದರಿಂದ ಇನ್ನೂ ಹೆಚ್ಚು ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ'' ಎಂದು ಅವರು ಹೇಳುತ್ತಾರೆ.

ಕರ್ತವ್ಯಕ್ಕೆ ಗೈರು ಹಾಜರಾಗಿರುವ ವೈದ್ಯರು ತಮ್ಮ ಗೈರಿಗೆ ತಲೆ ನೋವಿನಿಂದ ಹಿಡಿದು ವಯಸ್ಸಿನ ತನಕ ಎಲ್ಲಾ ನೆಪಗಳನ್ನು ಮುಂದೊಡ್ಡಿದ್ದಾರೆ, ಅದರೆ ಕೆಲವರು ಜ್ವರದಿಂದ ಬಳಲುತ್ತಿದ್ದಾರೆ ಎಂದು ಡಾ ಮತೀನ್ ಹೇಳಿದ್ದಾರೆ.

“ಈಗ ಬೆಳಿಗ್ಗೆ 7.30 ಆದರೆ ರಾತ್ರಿಯಂತೆ ಭಾಸವಾಗುತ್ತಿದೆ. ನಾನು ಬಿಟ್ಟರೆ ಇಲ್ಲಿ ಬೇರೆ ಯಾರೂ ಸಿಬ್ಬಂದಿಯಿಲ್ಲ.  ತಮ್ಮ ತಂದೆ, ತಾಯಿ, ಸೋದರನಿಗೆ  ಆಸ್ಪತ್ರೆಗಳಲ್ಲಿ ಬೆಡ್ ದೊರೆಯುತ್ತಿಲ್ಲ ಎಂದು ಹಲವರು ಕರೆ ಮಾಡುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಆಮ್ಲಜನಕ, ಬೆಡ್‍ ಗಳು ಹಾಗೂ ವೆಂಟಿಲೇಟರ್‍ ಗಳೂ ಇವೆ. ಇನ್ನೂ 30 ರೋಗಿಗಳನ್ನು ದಾಖಲಿಸಬಹುದು ಆದರೆ ವೈದ್ಯರೆಲ್ಲಿ ?, ನಿಮ್ಮ ದಿನದ ಸಮಯದ ಆರು ಗಂಟೆಗಳಷ್ಟೇ ಬೇಕು'' ಎಂದು ಅವರು ತಮ್ಮ ವೀಡಿಯೋ ಮನವಿಯಲ್ಲಿ  ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News