ಬೆಂಗಳೂರು: ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ ಆತ್ಮಹತ್ಯೆ

Update: 2020-07-06 17:23 GMT

ಬೆಂಗಳೂರು, ಜು.6: ಬಹುಕೋಟಿ ಹಗರಣ ಪ್ರಕರಣದಿಂದ ಸುದ್ದಿಯಾಗಿದ್ದ ಶ್ರೀ ಗುರು ರಾಘವೇಂದ್ರ ಕೋ- ಆಪರೇಟೀವ್ ಬ್ಯಾಂಕಿನ ಮಾಜಿ ಸಿಇಓ  ವಾಸುದೇವ್ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿರುವ ತಮ್ಮ‌ ನಿವಾಸದಲ್ಲಿಯೇ ಕಾರಿನಲ್ಲಿ ವಿಷ ಸೇವಿಸಿ ವಾಸುದೇವ್ ಮಯ್ಯ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಶ್ರೀ ಗುರು ರಾಘವೇಂದ್ರ ಬ್ಯಾಂಕಿನ ಪ್ರಮುಖರಾದ ಸಂತೋಷ್ ಕುಮಾರ್ ಎಂಬವರು ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿರುವ ಆರೋಪದ ಮೇಲೆ ವಾಸುದೇವ ಮಯ್ಯ ವಿರುದ್ಧ ದೂರು ನೀಡಿದ್ದರು. ವಾಸುದೇವ ಮಯ್ಯ 2012 ರಿಂದ 2018 ರವೆರೆಗೆ ಬ್ಯಾಂಕ್​ನ ಸಂಪೂರ್ಣ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಈ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ವಾಸುದೇವ್ ಮಯ್ಯ ಅವರ ಮೇಲಿತ್ತು.

ಇನ್ನು, ಪ್ರಕರಣದ ತನಿಖೆಯ ಹೊಣೆಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು, ಇತ್ತೀಚೆಗೆ ಎಸಿಬಿಯಿಂದ ಸಿಐಡಿಗೆ ವಹಿಸಿದ್ದರು.
ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆದಿರುವ ಬಗ್ಗೆ ಇತ್ತೀಚೆಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ‌ನಡೆಸಿತ್ತು. ಪ್ರಕರಣದ ತನಿಖೆಯನ್ನು ಸಿಐಡಿ‌ ನಡೆಸುವುದು ಒಳ್ಳೆಯದು ಎಂದು ಹೈಕೋರ್ಟ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿತ್ತು. ಪ್ರಕರಣದ ಜವಾಬ್ದಾರಿಯನ್ನು ಸಿಐಡಿ ತೆಗೆದುಕೊಂಡು ತನಿಖೆ ನಡೆಸುತಿತ್ತು. ಬ್ಯಾಂಕ್ ವಿರುದ್ಧ ಆರೋಪ ಕೇಳಿ ಬಂದಾಗ ಎಸಿಬಿ‌ಯಲ್ಲಿ ಪಿಎಂಎಲ್ ಅಡಿ ಪ್ರಕರಣ ದಾಖಲಾಗಿತ್ತು.

ಮೇಲ್ನೋಟಕ್ಕೆ ತನಿಖೆಗೆ ಹೆದರಿ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ‌‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News