ಡಿಸಿಇಟಿ-2020 ಆನ್‍ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Update: 2020-07-06 18:27 GMT

ಬೆಂಗಳೂರು, ಜು.6: ಡಿಪ್ಲೋಮಾ ಅಭ್ಯರ್ಥಿಗಳಿಗೆ 2020ನೆ ಸಾಲಿನ ಎರಡನೆ ವರ್ಷದ/ಮೂರನೆ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲು ರಾಜ್ಯ ಪರೀಕ್ಷಾ ಪ್ರಾಧಿಕಾರವು ಮತ್ತೊಂದು ಅಂತಿಮ ಅವಕಾಶ ನೀಡಿದೆ.

ಇಲ್ಲಿಯವರೆಗೆ ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳು ಜು.6ರ ಸಂಜೆ 6ರ ನಂತರ ಜು.9ರ ಸಂಜೆ 6.30ರವರೆಗೆ ಆನ್‍ಲೈನ್ ಮೂಲಕ ಸಲ್ಲಿಸಿ, ಜು.10ರೊಳಗಾಗಿ ಶುಲ್ಕವನ್ನು ಪಾವತಿಸಬಹುದು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಆದರೆ ಇಲ್ಲಿಯವರೆಗೆ ಶುಲ್ಕ ಪಾವತಿಸದೆ ಇರುವ ಅಭ್ಯರ್ಥಿಗಳು ಸಹ ಶುಲ್ಕವನ್ನು ಪಾವತಿಸಬಹುದು.

ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯಿಂದಾಗಿ, ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನುಕೂಲ ಮಾಡುವ ದೃಷ್ಟಿಯಲ್ಲಿ ಡಿಸಿಇಟಿ-2020 ಪರೀಕ್ಷೆಯನ್ನು ಈಗಾಗಲೆ ಪ್ರಕಟಿಸಿರುವ ಕೇಂದ್ರಗಳ ಜೊತೆಯಲ್ಲಿ ಹೆಚ್ಚುವರಿಯಾಗಿ ಆಯ್ದ ಕೇಂದ್ರಗಳಲ್ಲಿ ನಡೆಸಲು ಕ್ರಮ ವಹಿಸಲಾಗುತ್ತಿದೆ.

ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಹೊಸದಾಗಿ ಸೇರ್ಪಡೆ ಮಾಡಿದ ಸ್ಥಳಗಳನ್ನು ಪರಿಶೀಲಿಸಿದ ನಂತರ ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಈ ಮೊದಲೆ ನೀಡಿದ್ದ ಪರೀಕ್ಷಾ ಕೇಂದ್ರವನ್ನು ಈ ಮೇಲಿನ ವೇಳಾಪಟ್ಟಿಯಂತೆ ಬದಲಾಯಿಸಿಕೊಳ್ಳಲು ಮತ್ತು ಈಗಾಗಲೆ ಸಲ್ಲಿಸಿರುವ ಅರ್ಜಿಯಲ್ಲಿನ ವಿವರಗಳನ್ನು ಅರ್ಹತೆಯ ಆಧಾರದ ಮೇಲೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ವಿವರವಾದ ಮಾಹಿತಿಯನ್ನು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.inನಲ್ಲಿ ಪಡೆಯಬಹುದು ಎಂದು ಕಾರ್ಯನಿರ್ವಾಹಕ ಅಧಿಕಾರಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News