ಚೀನಾ ಅತಿಕ್ರಮಣ ಮಾಡಿಲ್ಲ ಎಂದ ಪ್ರಧಾನಿ ಮೋದಿ ಕ್ಷಮೆ ಯಾಚಿಸಬೇಕು: ಕಾಂಗ್ರೆಸ್

Update: 2020-07-07 07:12 GMT

ಹೊಸದಿಲ್ಲಿ: ಲಡಾಖ್‍ನ ಕೆಲ ಪ್ರದೇಶಗಳಿಂದ ಚೀನಾ ಸೇನೆಯನ್ನು ಭಾಗಶಃ ಹಿಂದಕ್ಕೆ ಪಡೆದ ಬಳಿಕ ಭಾರತೀಯ ಸೇನೆಯ ಶೌರ್ಯ ಮತ್ತು ಕೆಚ್ಚನ್ನು ಕೊಂಡಾಡಿದ ಕಾಂಗ್ರೆಸ್ ಪಕ್ಷ ಚೀನಾ ಅತಿಕ್ರಮಣ ಮಾಡಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದೆ.

“ನಮ್ಮ ಸಾಹಸಿ ಸೈನಿಕರು ಚೀನಾ ಸೇನೆಯನ್ನು ಹಿಂದಕ್ಕೆ ತಳ್ಳಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಚೀನಾ ಹಿಂದಕ್ಕೆ ಹೋಗುತ್ತಿದೆ ಎನ್ನುವುದು ಸಂತಸದ ವಿಚಾರ. ನಮ್ಮ ಸೇನೆ ಮತ್ತು ಸೈನಿಕರ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ವಿದೇಶಿ ಅತಿಕ್ರಮಣ ನಡೆದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಕ್ಲೀನ್‍ಚಿಟ್ ನೀಡಿದ್ದು, ಚೀನಾ ಗಲ್ವಾನ್ ಕಣಿವೆಯ ಮೇಲೆ ಹಕ್ಕು ಸ್ಥಾಪಿಸಲು ಇದನ್ನು ಬಳಸಿಕೊಳ್ಳುವ ಅಪಾಯ ಇದೆ” ಎಂದು ಎಐಸಿಸಿ ವಕ್ತಾರ ಪವನ್ ಖೇರಾ ಹೇಳಿದ್ದಾರೆ.

ಚೀನಾ ಭಾರತೀಯ ಭೂಪ್ರದೇಶದೊಳಕ್ಕೆ ಬಂದಿದ್ದರೆ ಮಾತ್ರ ಹಿಂದಕ್ಕೆ ಕರೆಸಿಕೊಳ್ಳಲು ಸಾಧ್ಯ; ಆದ್ದರಿಂದ ಈ ಕುರಿತ ಹೇಳಿಕೆಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಲಡಾಖ್ ಗಡಿಯ ಸ್ಥಿತಿಗತಿ ಬಗ್ಗೆ ಪ್ರಧಾನಿ ಅಥವಾ ರಕ್ಷಣಾ ಸಚಿವರು ದೇಶಕ್ಕೆ ಸತ್ಯ ಹೇಳಬೇಕು. 2020ರ ಏಪ್ರಿಲ್‍ನಲ್ಲಿದ್ದ ಯಥಾಸ್ಥಿತಿ ಮುಂದುವರಿಯಬೇಕು ಎಂದು ಹೇಳಿದರು. “ಚೀನಾ ಸಂಪೂರ್ಣವಾಗಿ ತನ್ನ ಸೇನೆ ಹಿಂತೆಗೆದುಕೊಳ್ಳುವವರೆಗೂ ಅವರನ್ನು ಭಾರತ ಹಿಂದಟ್ಟಬೇಕು” ಎಂದು ಆಗ್ರಹಿಸಿದರು.

“ಗಲ್ವಾನ್ ಕಣಿವೆಯಿಂದ ಚೀನಿ ಪಡೆ ವಾಪಾಸು ತೆರಳುತ್ತಿರುವುದು ಧನಾತ್ಮಕ ಬೆಳವಣಿಗೆ. ವಾಸ್ತವ ನಿಯಂತ್ರಣ ರೇಖೆಯಿಂದ ಸೇನೆ ವಾಪಾಸು ಕರೆಸಿಕೊಳ್ಳುವುದು ಮತ್ತು ಉದ್ವಿಗ್ನತೆ ಶಮನಗೊಳಿಸುವುದು ನಮ್ಮ ಆದ್ಯತೆ. ಪಾಂಗಾಂಗ್ ತ್ಸೋದಲ್ಲಿ ಚೀನಾ ಪಡೆಯನ್ನು ಸಂಪೂರ್ಣ ಹಿಂದಕ್ಕೆ ಅಟ್ಟಬೇಕು. ಇದಕ್ಕೆ ಬಾಹ್ಯ ಕಣ್ಗಾವಲು ಅಗತ್ಯ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News