ಚೀನಾದ ಕೇಂದ್ರ ಬ್ಯಾಂಕ್ ನಿಂದ ಭಾರತೀಯ ಬ್ಯಾಂಕ್, ಕಂಪನಿಗಳ ಷೇರು ಖರೀದಿ

Update: 2020-07-07 16:15 GMT

ಮುಂಬೈ: ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ವಿವರಗಳ ಪ್ರಕಾರ ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಎಚ್ ಡಿಎಫ್ ಸಿಯ ಶೇಕಡ 1ರಷ್ಟು ಷೇರನ್ನು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಏಪ್ರಿಲ್ ಮಧ್ಯದ ವೇಳೆಗೆ ಹೊಂದಿದೆ ಎಂದು ವರದಿಯಾಗಿದೆ.

ಅಂತೆಯೇ ಚೀನಾದ ಕೇಂದ್ರೀಯ ಬ್ಯಾಂಕ್ ಇತರ ಹಲವು ಲಿಸ್ಟೆಡ್ ಕಂಪನಿಗಳ ಷೇರುಗಳನ್ನು ಕೂಡಾ ಹೊಂದಿದೆ. ಆದರೆ ಇವೆಲ್ಲವೂ ಶೇಕಡ 1ಕ್ಕಿಂತ ಕಡಿಮೆಇದ್ದು, ಇವುಗಳ ವಿವರಗಳನ್ನು ಸೆಬಿಗೆ ನೀಡಬೇಕಿಲ್ಲ. ಇದರಲ್ಲಿ ಪ್ರಮುಖವಾಗಿ ಪಿಬಿಒಸಿ ಅಂಬುಜಾ ಸಿಮೆಂಟ್ನ ಶೇಕಡ 0.32 ಪಾಲನ್ನು ಹೊಂದಿರುವುದು, ಫಾರ್ಮಾ ವಲಯದ ಪಿರಮಲ್ ಎಂಟರ್ಪ್ರೈಸಸ್ ನ ಶೇಕಡ 0.43 ಷೇರುಗಳನ್ನು ಹೊಂದಿರುವುದು ಸೇರಿದೆ.

ಪಿಬಿಒಸಿ ಪ್ರಸ್ತುತ ಹೊಂದಿರುವ ಎಚ್ ಡಿಎಫ್ಸಿ ಷೇರುಗಳ ಮೌಲ್ಯ ಸುಮಾರು 3100 ಕೋಟಿ ರೂಪಾಯಿ. ಪಿರಮಲ್ ಎಂಟರ್ಪ್ರೈಸಸ್ ನ 137 ಕೋಟಿ ರೂಪಾಯಿ ಮೌಲ್ಯದ ಹಾಗೂ ಅಂಬುಜಾ ಸಿಮೆಂಟ್ನ 122 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಚೀನಾದ ಕೇಂದ್ರ ಬ್ಯಾಂಕ್ ಹೊಂದಿದೆ. ಎರಡು ವರ್ಷ ಹಿಂದೆ ಚೀನಾದ ಕೇಂದ್ರ ಬ್ಯಾಂಕ್ ತನ್ನ ಮಳಿಗೆಯನ್ನು ಇಲ್ಲಿ ತೆರೆಯಲು ಆರ್ ಬಿಐನಿಂದ ಅನುಮತಿ ಪಡೆದಿತ್ತು.

ಚೀನಾ ಸರ್ಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸಲ್ಪಡುವ ಹಲವು ಫಂಡ್ ಮತ್ತು ಹೂಡಿಕೆ ಕಂಪನಿಗಳು ಭಾರತೀಯ ಆರ್ಥಿಕತೆಗೆ ಅತ್ಯಂತ ಮಹತ್ವ ಎನಿಸಿದ ಹಲವು ಕಂಪನಿಗಳ ಷೇರುಗಳ ಮೇಲೆ ಕಣ್ಣಿಟ್ಟಿವೆ ಎಂದು ಭಾರತದಲ್ಲಿ ಚೀನಾ ಹೂಡಿಕೆ ಕುರಿತ ಎರಡು ವರದಿಗಳು ಇತ್ತೀಚೆಗೆ ಎಚ್ಚರಿಸಿದ್ದವು.

ಜರ್ಮನಿಯ ಪ್ರಮುಖ ಉತ್ಪಾದನಾ ಕಂಪನಿಯೊಂದರ ಭಾರತೀಯ ಘಟಕ, ದೇಶೀಯ ರಸಗೊಬ್ಬರ ಕಂಪನಿ ಸೇರಿದಂತೆ ಹಲವು ಕಂಪನಿಗಳ ಷೇರನ್ನು ಚೀನಾದ ಕೇಂದ್ರ ಬ್ಯಾಂಕ್ ಹೊಂದಿದೆ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತವೆ. ಆದರೆ ಇವೆಲ್ಲವೂ ಶೇಕಡ 1ಕ್ಕಿಂತ ಕಡಿಮೆ ಆಗಿರುವುದರಿಂದಇದು ಬಹಿರಂಗವಾಗಿ ಚರ್ಚೆಯಾಗುತ್ತಿಲ್ಲ.

ಅಂಬುಜಾ ಸಿಮೆಂಟ್ಸ್ನ 2019ರ ವಾರ್ಷಿಕ ವರದಿಯ ಪ್ರಕಾರ ಪಿಬಿಓಸಿ, ಆ ಕಂಪನಿಯ 63 ಲಕ್ಷ ಷೇರುಗಳನ್ನು ಹಂದಿದೆ. ಈ ಪೈಕಿ 16 ಲಕ್ಷ ಷೇರುಗಳನ್ನು ಸಣ್ಣಖರೀದಿ ಮೂಲಕವೇ ಖರೀದಿಸಿದೆ ಎನ್ನುವುದು ತಿಳಿದುಬರುತ್ತದೆ.

ಭಾರತ ಸರ್ಕಾರ ವಿದೇಶಿ ಹೂಡಿಕೆ ನಿಯಮಾವಳಿಗೆ ತಿದ್ದುಪಡಿ ಮಾಡಿ ಏಪ್ರಿಲ್ 17ರಂದು ಪತ್ರಿಕಾ ಪ್ರಕಟಣೆ ನೀಡಿದ ಹಿನ್ನೆಲೆಯಲ್ಲಿ ಎಚ್ಡಿಎಫ್ಸಿಯಲ್ಲಿ ಪಿಬಿಓಸಿ ಷೇರು ಹೊಂದಿರುವುದು ಬಹಿರಂಗವಾಗಿದೆ. ಭಾರತದ ಜತೆ ಗಡಿ ಹಂಚಿಕೊಳ್ಳುವ ಯಾವುದೇ ದೇಶ ಭಾರತದಲ್ಲಿ ಹೂಡಿಕೆ ಮಾಡಬೇಕಿದ್ದರೆ ಸರ್ಕಾರದ ಅನುಮೋದನೆ ಅಗತ್ಯ. ಈ ನಿರ್ಬಂಧನೆಗಳು ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೂ ಅನ್ವಯಿಸುತ್ತವೆ. ಏಪ್ರಿಲ್ 17ರ ಬಳಿಕ ಚೀನಾದ ಹೂಡಿಕೆಯೂ ಈ ವ್ಯಾಪ್ತಿಗೆ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News