ಗುತ್ತಿಗೆ ವೈದ್ಯರ ಸೇವೆ ಖಾಯಂ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ: ಸಚಿವ ಶ್ರೀರಾಮುಲು

Update: 2020-07-08 11:58 GMT

ಬೆಂಗಳೂರು, ಜು. 8: ಗುತ್ತಿಗೆ ವೈದ್ಯರ ಸೇವೆ ಖಾಯಂಗೊಳಿಸುವ ಸಂಬಂಧ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪನೆ ಸಲ್ಲಿಸಿ, ಯಾರಿಗೂ ಅನ್ಯಾಯವಾಗದಂತೆ ಒಂದು ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಗುತ್ತಿಗೆ ವೈದ್ಯರಿಗೆ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಬುಧವಾರ ಇಲ್ಲಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಗುತ್ತಿಗೆ ವೈದ್ಯರ ಸಂಘದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಕೊರೋನ ಸೋಂಕಿನ ಸಂಕಷ್ಟ ಪರಿಸ್ಥಿತಿಯಲ್ಲಿ ನೀವೆಲ್ಲರೂ ಶಕ್ತಿಮೀರಿ ಸೇವೆ ಸಲ್ಲಿಸಿದ್ದು, ನಿಮಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ. ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

2017ರಿಂದ ಗುತ್ತಿಗೆ ವೈದ್ಯರು ಖಾಯಂಗೊಳಿಸುವ ಕೆಲಸ ಮಾಡಿಲ್ಲ. ಆದರೆ, ಈ ಬಾರಿ ಸರಕಾರ ಸೂಕ್ತ ನಿರ್ಧಾರ ಕೈಗೊಂಡಿದೆ. ನಿನ್ನೆ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಸರಕಾರ ನಿರ್ಧಾರವನ್ನು ತಿಳಿಸಲಾಗಿದೆ. ನೇಮಕಾತಿ ಸಂಬಂಧ ಕಳೆದ ಬಾರಿಯ ಆದೇಶದಲ್ಲಿ ಬದಲಾವಣೆ ಮಾಡಲಾಗುವುದು. ಸಂಪುಟದಲ್ಲಿ ಚರ್ಚಿಸಿ, ಶುಕ್ರವಾರ(ಜು.10)ದಿಂದಲೇ ಪ್ರಕ್ರಿಯೆ ಆರಂಭಿಸಲಾಗುವುದು. ಗುತ್ತಿಗೆ ವೈದ್ಯರ ಬೇಡಿಕೆ ಸಿಎಂ ಗಮನಕ್ಕೆ ತರಲಾಗುವುದು ಎಂದರು.

ಸೋಂಕು ನಿಯಂತ್ರಣಕ್ಕಾಗಿ ಹಗಲು-ರಾತ್ರಿಗಳ ಪರಿವೇ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ವೈದ್ಯರು ಶ್ರಮಿಸುತ್ತಿದ್ದು, 507 ವೈದ್ಯರಲ್ಲಿ ಯಾರಿಗೂ ಅನ್ಯಾಯವಾಗದಂತೆ ತೀರ್ಮಾನ ಮಾಡಲಾಗುವುದು. ಹೀಗಾಗಿ ವೈದ್ಯರು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವ ಭರವಸೆ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News