ಕೊರೋನ ಎಫೆಕ್ಟ್: ಡಿಎಲ್, ಎಲ್‍ಎಲ್‍ಆರ್ ಪಡೆಯಲು ವಾಹನ ಸವಾರರ ಪರದಾಟ

Update: 2020-07-08 12:56 GMT

ಬೆಂಗಳೂರು, ಜು.8: ಕೊರೋನ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ಕಲಿಕಾ ಪರವಾನಿಗೆ(ಎಲ್‍ಎಲ್‍ಆರ್) ಹಾಗೂ ವಾಹನ ಚಾಲನಾ ಪರವಾನಿಗೆ(ಡಿಎಲ್) ಪಡೆಯಲು ಮೂರು ದಿನಗಳಷ್ಟು ಕಾಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಲಾಕ್‍ಡೌನ್ ಅವಧಿಯಲ್ಲಿನ ಅರ್ಜಿಗಳ ವಿಲೇವಾರಿಗೆ ಬಾಕಿಯಿರುವ ಕಾರಣ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದವರಿಗೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಕಳೆದ ವಾರ ಎಲ್‍ಎಲ್‍ಆರ್ ಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದೆ. ಸೆಪ್ಟೆಂಬರ್ ಗೆ ಸಮಯ ನಿಗದಿ ಮಾಡಿದ್ದಾರೆ(ಸ್ಲಾಟ್). ಸಾರ್ವಜನಿಕ ಬಸ್, ರೈಲು ಸಂಚಾರ ಕಡಿಮೆಯಾಗಿದೆ. ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಸ್ವಂತ ವಾಹನದಲ್ಲಿ ಸಂಚರಿಸಿ ಎಂದು ಸರಕಾರ ಹೇಳುತ್ತಿದ್ದು, ಎಲ್‍ಎಲ್ ಅಥವಾ ಡಿಎಲ್‍ಗಳಿಲ್ಲದೆ ನಗರದಲ್ಲಿ ವಾಹನ ಸಂಚಾರ ಹೇಗೆ ಸಾಧ್ಯ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಸ್ವಂತ ವಾಹನದಲ್ಲಿ ಸುರಕ್ಷತೆ ಹೆಚ್ಚು. ಕಲಿಕಾ ಪರವಾನಿಗೆ, ಚಾಲನಾ ಪರವಾನಿಗೆ ಅರ್ಜಿಗಳನ್ನು ಸಾರಿಗೆ ಇಲಾಖೆ ಬೇಗ ವಿಲೇವಾರಿ ಮಾಡಿದರೆ ಅನುಕೂಲವಾಗುತ್ತದೆ ಎಂದು ಮುನಿಕೃಷ್ಣಪ್ಪ ಎಂಬುವವರು ದೂರಿದ್ದಾರೆ.

ಕೊರೋನ ಪರಿಣಾಮ: ಲಾಕ್‍ಡೌನ್ ಸಂದರ್ಭದಲ್ಲಿ ಸಲ್ಲಿಸಿದ್ದ ಅರ್ಜಿಗಳ ದಿನಾಂಕವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಹೀಗಾಗಿ, ಈಗ ಅರ್ಜಿ ಸಲ್ಲಿಸುತ್ತಿರುವವರಿಗೆ ಆಗಸ್ಟ್ ಅಥವಾ ಸೆಪ್ಟೆಂಬರ್ ‘ಸ್ಲಾಟ್’ ಸಿಕ್ಕಿರಬಹುದು. ಹೆಚ್ಚು ಜನ ಸೇರಬಾರದು ಎಂಬ ಕಾರಣಕ್ಕೆ ದಿನಕ್ಕೆ 50 ಜನರಿಗೆ ಮಾತ್ರ ಪರೀಕ್ಷೆಗೆ ಆಹ್ವಾನಿಸಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಆರ್‍ಟಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News