2021ರ ಚಳಿಗಾಲದಲ್ಲಿ ಭಾರತದಲ್ಲಿ ಪ್ರತೀ ದಿನ 2.87 ಲಕ್ಷ ಕೊರೋನ ಸೋಂಕು: ತಜ್ಞರ ಅಂದಾಜು

Update: 2020-07-08 16:47 GMT

ಹೊಸದಿಲ್ಲಿ, ಜು.8: ಲಸಿಕೆ ಅಥವಾ ಔಷಧದ ಕೊರತೆಯ ಹಿನ್ನೆಲೆಯಲ್ಲಿ, 2021ರ ಚಳಿಗಾಲದ ಅಂತ್ಯದ ವೇಳೆಗೆ ಭಾರತದಲ್ಲಿ ಪ್ರತೀ ದಿನ 2.87 ಕೊರೋನ ಸೋಂಕು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಹೇಳಿದ್ದಾರೆ.

 ಕೊರೋನ ಸೊಂಕಿನ ವಿರುದ್ಧ ಯಾವುದೇ ಪರಿಣಾಮಕಾರಿ ಔಷಧ ಅಥವಾ ಲಸಿಕೆಯ ಅಲಭ್ಯತೆಯಿಂದ 2021ರ ವಸಂತಕಾಲದ ಸಂದರ್ಭ ವಿಶ್ವದಲ್ಲಿ ಕೊರೋನ ಸೋಂಕಿತರ ಸಂಖ್ಯೆ 24.9 ಕೋಟಿ ದಾಟಲಿದೆ ಮತ್ತು 18 ಲಕ್ಷ ಜನ ಸಾಯಲಿದ್ದಾರೆ ಎಂದು ಎಂಐಟಿಯ ಸ್ಲೊವಾನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸಂಶೋಧಕರು ನಡೆಸಿದ ಅಧ್ಯಯನದ ವರದಿ ತಿಳಿಸಿದೆ. ಈ ಅಧ್ಯಯನಕ್ಕೆ ಕೊರೋನ ಸೋಂಕಿನ ಬಹುದೇಶದ ಮಾದರಿಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಬಹುದೇಶದ ಎಸ್ಇಐಆರ್ (ಅತಿ ಸಂವೇದನಾಶೀಲ, ಅನಾವೃತ, ಸಾಂಕ್ರಾಮಿಕ, ಚೇತರಿಕೆ) ಮಾದರಿಯನ್ನು ಅನುಸರಿಸಿ 84 ದೇಶಗಳಲ್ಲಿ ಕೊರೋನ ಸೋಂಕು ಪ್ರಸಾರದ ಗತಿಯನ್ನು ಅಂದಾಜು ಮಾಡಲಾಗಿದೆ.

ಪ್ರತಿಯೊಂದು ದೇಶದಲ್ಲೂ ಜನಸಂಖ್ಯೆಯನ್ನು ಅತಿ ಸಂವೇದನಾಶೀಲ, ಲಕ್ಷಣಾತ್ಮಕ , ಸೋಂಕಿತ ಪೂರ್ವ ಪರೀಕ್ಷೆ, ಸೋಂಕಿತ ನಂತರದ ಪರೀಕ್ಷೆ ಮತ್ತು ಚೇತರಿಸಿಕೊಂಡ ಪ್ರಮಾಣದ ಆಧಾರದಲ್ಲಿ ವಿಶ್ಲೇಷಿಸಲಾಗಿದೆ. ಜನಸಂಖ್ಯಾಶಾಸ್ತ್ರ ಮತ್ತು ಆಸ್ಪತ್ರೆಗೆ ದಾಖಲು ಪ್ರಮಾಣಕ್ಕೆ ಸಂಬಂಧಿಸಿ ರೋಗಪ್ರಸಾರ ಚಲನಶಾಸ್ತ್ರ, ದೇಶದ ಮಟ್ಟದಲ್ಲಿ ಅಪಾಯದ ಗ್ರಹಿಕೆ, ಹವಾಮಾನ, ಪರೀಕ್ಷೆಯ ಪ್ರಮಾಣ, ಸೋಂಕಿನ ಸ್ಥಿತಿ, ಮರಣದ ಪ್ರಮಾಣ, ಸಾವಿನ ಅಂಕಿಅಂಶದ ಆಧಾರದಲ್ಲಿ ಅಧ್ಯಯನ ನಡೆಸಲಾಗಿದೆ. ಅಧ್ಯಯನದ ಪ್ರಕಾರ 2021ರ ಚಳಿಗಾಲದ ಅಂತ್ಯದ ವೇಳೆಗೆ, ಯೋಜಿತ ದೈನಂದಿನ ಸೋಂಕಿನ ಪ್ರಮಾಣದ ಆಧಾರದಲ್ಲಿ ಅಗ್ರ 10ರಲ್ಲಿ ಕಾಣಿಸಿಕೊಳ್ಳುವ ರಾಷ್ಟ್ರಗಳೆಂದರೆ ಭಾರತ, ಅವೆುರಿಕ, ದಕ್ಷಿಣ ಆಫ್ರಿಕಾ, ಇರಾನ್, ಇಂಡೋನೇಶಿಯಾ, ನೈಜೀರಿಯಾ, ಟರ್ಕಿ, ಫ್ರಾನ್ಸ್ ಮತ್ತು ಜರ್ಮನಿ.

ಇದರಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ ಬಳಿಕ ಅಮೆರಿಕ (ಪ್ರತೀ ದಿನ 95,000 ಸೋಂಕು ಪ್ರಕರಣ), ದಕ್ಷಿಣ ಆಫ್ರಿಕಾ (ಪ್ರತೀ ದಿನ 21,000 ಪ್ರಕರಣ), ಇರಾನ್ (ಪ್ರತೀ ದಿನ 17,000 ಪ್ರಕರಣ), ಇಂಡೋನೇಶಿಯಾ (ಪ್ರತೀ ದಿನ 13,000 ಪ್ರಕರಣ)ಗಳಿರಲಿವೆ.

ಅಧಿಕೃತ ವರದಿಗಿಂತಲೂ ಸಾವಿನ ವಾಸ್ತವಿಕ ಸಂಖ್ಯೆ ಹೆಚ್ಚಿರಲಿದೆ. ಹೆಚ್ಚಿನ ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಲಿದ್ದು ರೋಗ ನಿರೋಧಕ ಶಕ್ತಿಗಾಗಿ ಕಾಯುವುದು ಕಾರ್ಯಸಾಧ್ಯವಾದ ಮಾರ್ಗವಲ್ಲ. ಯಾವುದಾದರೂ ಲಸಿಕೆ ಅಥವಾ ಔಷಧ ವ್ಯಾಪಕವಾಗಿ ಲಭ್ಯವಾಗುವವರೆಗೆ ಪ್ರತೀ ಸಮುದಾಯವೂ ಈ ರೋಗವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಿದೆ. ನಿಧಾನಗತಿಯ ಅಥವಾ ಅರೆಮನಸ್ಸಿನ ಪ್ರತಿಕ್ರಿಯೆ ಮನುಷ್ಯರ ಸಾವಿನ ಪ್ರಮಾಣವನ್ನು ಹೆಚ್ಚಿಸಲಿದೆ. ಅಲ್ಲದೆ ಆರ್ಥಿಕ ಅಭಿವೃದ್ಧಿಯನ್ನೂ ಕುಂಠಿತಗೊಳಿಸಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News