ಬೆಂಗಳೂರು ನಗರದಲ್ಲಿಂದು 1,148 ಮಂದಿಗೆ ಕೊರೋನ ದೃಢ, 24 ಮಂದಿ ಬಲಿ

Update: 2020-07-08 17:14 GMT

ಬೆಂಗಳೂರು, ಜು.8: ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಮತ್ತೆ ಸಾವಿರದ ಗಡಿ ದಾಟಿದ್ದು, ಬುಧವಾರ ಒಂದೇ ದಿನ 1,148 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ 24 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 12,509ಕ್ಕೆ ಏರಿಕೆಯಾಗಿದ್ದು, 290 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 10,103 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 177 ಜನರು ಸೋಂಕಿಗೆ ಬಲಿಯಾಗಿದ್ದು, ಬುಧವಾರ 418 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 20,399 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಬೆಡ್ ಸಿಗದ ಹಿನ್ನೆಲೆ ಸಿಎಂ ಮನೆಗೆ ಹೋದ ಸೋಂಕಿತ

ಸೋಂಕಿತನೊಬ್ಬ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆ ಬಳಿ ಹೋದ ಘಟನೆ ನಡೆದಿದೆ.

ಕೆ.ಜಿ ಹಳ್ಳಿಯ ಕೊರೋನ ಸೊಂಕಿತ ವ್ಯಕ್ತಿ ಚಿಕಿತ್ಸೆಗಾಗಿ ಬೆಡ್ ಸಿಗದ ಹಿನ್ನೆಲೆಯಲ್ಲಿ ಆಟೋದಲ್ಲೇ ಯಾತನೆ ಅನುಭವಿಸಿ ಕೊನೆಗೆ ಸಿಎಂ ಮನೆ ಬಳಿಗೆ ತೆರಳಿ ತನ್ನ ಅಳಲು ತೋಡಿಕೊಂಡಿದ್ದಾನೆ. ನಂತರ ಸೋಂಕಿತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಮಗಳು

ಶಕ್ತಿಗಣಪತಿ ನಗರದ ಆಟೋ ಚಾಲಕನಿಗೆ ಕೊರೋನ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ಅವರನ್ನು ಸುಮನಹಳ್ಳಿ ಚಿತಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದು, ಆಟೋ ಚಾಲಕನ ಪುತ್ರಿ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಶಾಸಕ

ಶಾಂತಿನಗರ ಕ್ಷೇತ್ರದಲ್ಲಿ ಕೊರೋನ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಶಾಸಕ ಹಾರಿಸ್ ಶಾಂತಿನಗರ ಲಾಕ್‍ಡೌನ್ ಮಾಡಿ, ಜನಜಾಗೃತಿ ಅಭಿಯಾನ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಇಂದು ಸ್ವಯಂ ನಿರ್ಬಂಧಕ್ಕೆ ಕರೆ ಕೊಟ್ಟಿದ್ದೆ. ಆದರೂ ಜನರು ಮನೆಯಿಂದ ಹೊರ ಬಂದಿದ್ದಾರೆ. ದಯವಿಟ್ಟು ಮನೆಯಿಂದ ಯಾರೂ ಹೊರಬರಬೇಡಿ ಅಂತ ಕೇಳಿಕೊಳ್ಳುತ್ತೇನೆ. ನನ್ನ ಕ್ಷೇತ್ರದಲ್ಲಿ 140 ಪಾಸಿಟಿವ್ ಕೇಸ್ ಇವೆ. ಹೀಗಾಗಿ ನಾನು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News