ಆಸ್ಪತ್ರೆಗಳಿಗೆ ಅಲೆದಾಡಿದರೂ ಸಿಗದ ಚಿಕಿತ್ಸೆ; ಆ್ಯಂಬುಲೆನ್ಸ್ ನಲ್ಲಿಯೇ ಪ್ರಾಣಬಿಟ್ಟ ಬೆಂಗಳೂರಿನ ವ್ಯಕ್ತಿ

Update: 2020-07-08 17:38 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.8: ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗೆ ನಗರದ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಮುಂದಾಗದ ಹಿನ್ನೆಲೆ ವ್ಯಕ್ತಿಯು ಆ್ಯಂಬುಲೆನ್ಸ್ ನಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. 

55 ವರ್ಷದ ಪ್ರಹ್ಲಾದ್ ಎಂಬವರು ಆ್ಯಂಬುಲೆನ್ಸ್ ನಲ್ಲಿಯೇ ಮೃತಪಟ್ಟವರು. ಉಸಿರಾಟದ ಸಮಸ್ಯೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ವಾಲ್ಮೀಕಿ ನಗರದ ನಿವಾಸಿಯಾಗಿರುವ ಪ್ರಹ್ಲಾದ್ ಅವರಿಗೆ ಬುಧವಾರ ಬೆಳಗ್ಗೆ 7 ಗಂಟೆಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆ್ಯಂಬುಲೆನ್ಸ್ ಗೆ ಕರೆ ಮಾಡಿದರೆ ಗಂಟೆಯಾದರೂ ಬಂದಿಲ್ಲ. ಅದಕ್ಕಾಗಿ ಆಟೋದಲ್ಲಿಯೇ ಕಿಮ್ಸ್ ಆಸ್ಪತ್ರೆಗೆ ತೆರಳಿದ್ದಾರೆ. ಅವರು ಬೆಡ್‍ಗಳ ಕೊರತೆ ಇದೆ ಎಂದು ರಾಜಾಜಿನಗರದ ಇಎಸ್‍ಐ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ.

ಅಲ್ಲಿಂದ ಇಎಸ್‍ಐ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಕೂಡ ಬೆಡ್‍ಗಳಿಲ್ಲವೆಂದು ಜಾಲಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಲು ತಿಳಿಸಿದ್ದಾರೆ. ಅಲ್ಲಿಯೂ ಕೂಡ ಬೆಡ್‍ಗಳ ನೆಪವೊಡ್ಡಿ ಹಿಂದಕ್ಕೆ ಕಳುಹಿಸಿದ್ದು, ಮಧ್ಯಾಹ್ನದ ವೇಳೆಗೆ ರೋಗಿಯು ಆ್ಯಂಬುಲೆನ್ಸ್ ನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರೆ ಪ್ರಹ್ಲಾದ್ ಬದುಕುತ್ತಿದ್ದರು. ಸೌಜನ್ಯಕ್ಕಾದರೂ ಪ್ರಾಥಮಿಕ ಚಿಕಿತ್ಸೆ ನೀಡಿಲ್ಲ. ಮಹಾನಗರದಲ್ಲಿಯೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿಲ್ಲವೆಂದರೆ ಹೇಗೆ ? ಪಾಲಿಕೆ ಮತ್ತು ಸರಕಾರ ಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ವಿಫಲವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಸಚಿವ ಡಾ.ಸುಧಾಕರ್, ಯಾವುದೇ ರೋಗಿಗೆ ತುರ್ತು ಚಿಕಿತ್ಸೆ ನೀಡುವುದು ಆಸ್ಪತ್ರೆಗಳ ಜವಾಬ್ದಾರಿಯಾಗಿದ್ದು, ಚಿಕಿತ್ಸೆ ನೀಡದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿರುವುದು ಖಂಡನೀಯ. ಈ ಆಸ್ಪತ್ರೆಗಳಿಗೆ ನೋಟಿಸ್ ನೀಡಿ, ತನಿಖೆ ನಡೆಸಲಾಗುವುದು. ಈ ಸಂಬಂಧ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News