ಆನ್‍ಲೈನ್ ಶಿಕ್ಷಣ: ನ್ಯಾಯಾಲಯದ ತೀರ್ಪು ಸ್ವೀಕರಿಸಿದ ಬಳಿಕ ಮುಂದಿನ ತೀರ್ಮಾನ- ಸುರೇಶ್‍ ಕುಮಾರ್

Update: 2020-07-08 17:47 GMT

ಬೆಂಗಳೂರು, ಜು. 8: ರಾಜ್ಯ ಸರಕಾರವು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆನ್‍ಲೈನ್ ಶಿಕ್ಷಣ ನಿಯಂತ್ರಿಸಲು ಹೊರಡಿಸಿದ ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯವು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದ್ದು, ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಿದ ಬಳಿಕ ಸರಕಾರವು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸಚಿವ ಸುರೇಶ್‍ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಶಾಲಾ ಕಾಲೇಜುಗಳ ಪುನರಾರಂಭದ ಬಗ್ಗೆಯಾಗಲೀ ಅಥವಾ ಆನ್‍ಲೈನ್ ತರಗತಿಗಳ ಬಗ್ಗೆಯಾಗಲೀ ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರಕಾರ ತೀರ್ಮಾನ ಕೈಗೊಳ್ಳಲಿದ್ದು, ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳು ನಿಜವಲ್ಲ ಎಂದು ಅವರು ಹೇಳಿದ್ದಾರೆ.

ತರಗತಿಗಳ ಆರಂಭದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕಲ್ಪಿತ ಸುದ್ದಿಗಳಿಗೆ ಕಿವಿಗೊಡಬಾರದು. ಆನ್‍ಲೈನ್ ಶಿಕ್ಷಣದ ಬಗ್ಗೆ ರಚಿಸಲಾಗಿದ್ದ ತಜ್ಞರ ಸಮಿತಿಯ ವರದಿ ಅಥವಾ ಬೇರೆ ಬೇರೆ ಆಯಾಮಗಳಲ್ಲಿ ಸರಕಾರದ ಹಂತಗಳಲ್ಲಿ ನಡೆಯುವ ಚರ್ಚೆಗಳು ಎಂದಿಗೂ ಅಂತಿಮ ನಿರ್ಣಯವಾಗಲು ಸಾಧ್ಯವಿಲ್ಲ. ಶಾಲೆಗಳ ಆರಂಭದ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ತೀರ್ಮಾನಗಳನ್ನು ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯಗಳನ್ನು ವಿದ್ಯಾರ್ಥಿಗಳ ಹಿತ ಮತ್ತು ವಿದ್ಯಾರ್ಜನೆಯ ಪರ ತೀರ್ಮಾನ ಕೈಗೊಳ್ಳಲು ಸರಕಾರ ಸಮರ್ಥವಾಗಿದೆ. ಸರಕಾರ ತನ್ನ ನಿರ್ಣಯವನ್ನು ಅಧಿಕೃತವಾಗಿ ಪ್ರಕಟಿಸುವ ಮೊದಲೇ ಅಂತೆ ಕಂತೆ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News