ತೃತೀಯ ಲಿಂಗ ಸಮುದಾಯಕ್ಕೆ ‘ಭರವಸೆಯ ಯೋಜನೆ' ಆಶಾಕಿರಣ: ಕೆ.ರತ್ನಪ್ರಭಾ

Update: 2020-07-08 18:22 GMT

ಬೆಂಗಳೂರು, ಜು.8: ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಕೋಲಾರ ಜಿಲ್ಲೆಯಲ್ಲಿ ತೃತೀಯ ಲಿಂಗದ ಸಮುದಾಯಕ್ಕೆ ‘ಭರವಸೆಯ ಯೋಜನೆ’ (ಪ್ರಾಜೆಕ್ಟ್ ಹೋಪ್) ಮೂಲಕ ಡೈರಿ ಫಾರ್ಮಿಂಗ್ ನಡೆಸಲು ಕೌಶಲ್ಯ ತರಬೇತಿ ನೀಡಿ, ಸೌಲಭ್ಯ ಒದಗಿಸಿಕೊಡಲಾಗಿದೆ.

ಇಂದು ಈ ಯೋಜನೆಯ ಸಮ್ಮೇಳನ ಸಮಾರಂಭವನ್ನು ಆನ್‍ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಈ  ಕಾನ್ಫರೆನ್ಸ್ ನಲ್ಲಿ ಕೆಎಸ್‍ಡಿಎ ಅಧ್ಯಕ್ಷೆ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಈ ವಿನೂತನ ಯೋಜನೆಗೆ ತೃತೀಯ ಲಿಂಗದ ಸಮುದಾಯವನ್ನು ಆಯ್ಕೆ ಮಾಡಿಕೊಂಡಿದ್ದು ಅವರಿಗೆ ಗೌರವಯುತ ಜೀವನ ನಡೆಸಲು ಡೈರಿ ಫಾರ್ಮಿಂಗ್ ಕುರಿತ ತರಬೇತಿ ನೀಡಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ‘ಕಾಲಿನ್ಸ್ ಏರೋಸ್ಪೇಸ್ ಇಂಡಿಯಾ’ ಹೊತ್ತಿದ್ದು, ಆರೆಂಜ್ ಟೆಕ್ ವತಿಯಿಂದ ಈ ಸಮುದಾಯಕ್ಕೆ ಕೌಶಲ್ಯ ತರಬೇತಿ ನೀಡಲಾಗಿದೆ.

ಇಂದು ಈ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರತ್ನಪ್ರಭಾ, ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ತೃತೀಯ ಲಿಂಗದ ಸಮುದಾಯದವರು ಇಚ್ಚಿಸುತ್ತಾರೆ. ಆದರೆ ಅವರಿಗೆ ಶಿಕ್ಷಣ ಹಾಗೂ ಕೌಶಲ್ಯದ ಕೊರತೆಯಿಂದ ಅವರು ಉದ್ಯೋಗ ವಂಚಿತರಾಗುತ್ತಿದ್ದಾರೆ ಎಂದರು.

ಕಾಲಿನ್ಸ್ ಏರೋಸ್ಪೇಸ್ ಹಾಗೂ ಆರೆಂಜ್ ಟೆಕ್ ಅವರ ಈ ಹೆಜ್ಜೆ ಅತ್ಯಂತ ಶ್ಲಾಘನೀಯ. ಸಮಾಜದಲ್ಲಿ ತೃತೀಯ ಲಿಂಗದ ಸಮುದಾಯದವರೂ ಗೌರವಯುತವಾದ ಜೀವನ ನಡೆಸಲು ಇವರು ಅನುವು ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಕೋಲಾರದಲ್ಲಿರುವ ಸಂಕಲ್ಪ ಎಂಬ ಟ್ರಸ್ಟ್ ನನ್ನು ಆಯ್ಕೆ ಮಾಡಿಕೊಂಡು ಅವರಿಗೆ ಜಾನುವಾರುಗಳ ಸಾಕಾಣಿಕೆ ಸಂಬಂಧ ತರಬೇತಿ ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗ ಈ ಸಮುದಾಯದ ಕೆಲವರು ಜಾನುವಾರುಗಳನ್ನು ಸಾಕುವ ಮೂಲಕ ಡೈರಿಗಳಿಗೆ ಹಾಲು ಪೂರೈಕೆ ಮಾಡುವುದು, ಹಾಲಿನಿಂದ ಇತರೆ ಉತ್ಪನ್ನ ತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಕಾರ್ಪೋರೇಟ್ ಸಂಸ್ಥೆಗಳು ಇಂಥ ಉಪಯುಕ್ತ ಯೋಜನೆಗಳಿಗೆ ಹಣ ನೀಡುವ ಮೂಲಕ ಸಮಾಜಕ್ಕೆ ಸಹಾಯ ಹಸ್ತ ಚಾಚಬೇಕು. ಸರಕಾರ ಇಂಥವರಿಗೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ರತ್ನಪ್ರಭಾ ಭರವಸೆ ನೀಡಿದರು.

ಕಾಲಿನ್ಸ್ ಏರೋಸ್ಪೇಸ್ ಇಂಡಿಯಾದ ಹಾಗೂ ಸಿಎಸ್‍ಆರ್ ಮುಖ್ಯಸ್ಥ ಅಮಿತ್ ಸಾವರ್ಕರ್, ಎನ್‍ಎಸ್‍ಡಿಸಿ ಎಂಗೇಜ್ಮೆಂಟ್ ಸೌತ್‍ನ ಮುಖ್ಯಸ್ಥ ಗೌರವ್ ಕಪೂರ್, ಕಾಲಿನ್ಸ್ ಏರೋಸ್ಪೇಸ್ ಇಂಡಿಯಾದ ಎಂಡಿ ಪರಾಗ್ ವಾಧಾವಾ, ಯುಎಸ್‍ಎ ಗ್ಲೋಬಲ್ ಡೈರೆಕ್ಟರ್ ಹಾಗೂ ಸಿಎಸ್‍ಆರ್ ಕಾಲಿನ್ಸ್ ಏರೋಸ್ಪೇಸ್‍ನ ಕ್ಯಾರಿ ರೀಡರ್ ಹಾಗೂ ಸಂಕಲ್ಪ ಟ್ರಸ್ಟ್‍ನ ಫಲಾನುಭವಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News