ಬೆಂಗಳೂರು ನಗರದಲ್ಲಿ ಒಂದೇ ದಿನ 1373 ಕೊರೋನ ಪ್ರಕರಣಗಳು ದೃಢ

Update: 2020-07-09 17:02 GMT

ಬೆಂಗಳೂರು, ಜು.9: ನಗರದಲ್ಲಿ ಗುರುವಾರ ಒಂದೇ ದಿನ 1,373 ಕೊರೋನ ಸೋಂಕು ದೃಢಪಟ್ಟಿದ್ದು, 292 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ 13,882ಕ್ಕೆ ಏರಿಕೆಯಾಗಿದ್ದು, ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 10,870 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ 177 ಜನರು ಕೊರೋನ ಸೋಂಕಿಗೆ ಬಲಿಯಾಗಿದ್ದು, ಗುರುವಾರ 606 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 20,935 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಮೃತಪಟ್ಟು 4 ದಿನಗಳ ನಂತರ ವರದಿ

ಏಳು ವರ್ಷದ ಮೃತ ಮಗನ ಶವವಿಟ್ಟುಕೊಂಡು ತಂದೆಯೊಬ್ಬರು ಕೊರೋನ ವರದಿಗಾಗಿ ನಾಲ್ಕು ದಿನ ಕಾದ ಘಟನೆ ಹೆಬ್ಬಾಳದಲ್ಲಿ ನಡೆದಿದೆ.

ಜು.2 ರಂದು ಸಂಜೆ 6.45 ಸುಮಾರಿಗೆ ಆಟವಾಡುತ್ತಿದ್ದ ಬಾಲಕ 2ನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಬಳಿಕ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೇ ವಾಪಸ್ ಕಳುಹಿಸಿದ್ದಾರೆ. ನಂತರ ವಿಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಹೆಬ್ಬಾಳ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದಿದ್ದಾರೆ. ಅದಕ್ಕೂ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. 4 ದಿನದ ನಂತರ ವರದಿ ಬಂದಿದ್ದು, ನಂತರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಿರ್ಮಾಪಕರೊಬ್ಬರಿಗೆ ಸೋಂಕು ದೃಢ, ದೊಡ್ಡಣ್ಣ ಕ್ವಾರಂಟೈನ್

ಚಲನಚಿತ್ರ ನಿರ್ಮಾಪಕರೊಬ್ಬರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಕೊರೋನ ಇರುವುದು ದೃಢವಾಗಿದೆ. ಇತ್ತೀಚಿಗೆ ಸಂಸದೆಯೊಬ್ಬರಿಗೆ ಕೊರೋನ ದೃಢಪಟ್ಟಿತ್ತು. ರಾಕ್‍ಲೈನ್ ವೆಂಕಟೇಶ್ ಅವರು ಸಂಸದೆಯೊಂದಿಗೆ ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಹಿರಿಯ ನಟ ದೊಡ್ಡಣ್ಣ ಭಾಗಿಯಾಗಿದ್ದರು. ಇದೀಗ ಸೋಂಕು ದೃಢಪಟ್ಟ ನಿರ್ಮಾಪಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ದೊಡ್ಡಣ ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News