ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೊರೋನ: ನಿಯಂತ್ರಣ-ನಿರ್ವಹಣೆಗೆ ಸಚಿವರ ಉಸ್ತುವಾರಿ

Update: 2020-07-09 17:36 GMT

ಬೆಂಗಳೂರು, ಜು. 9: ಬೆಂಗಳೂರು ನಗರದಲ್ಲಿ ಮಾರಕ ಕೊರೋನ ವೈರಸ್ ಸೋಂಕು ದಿನದಿಂದ ದಿನಕ್ಕೆ ಏರಿಕೆ ಹಿನ್ನೆಲೆಯಲ್ಲಿ ಅದರ ನಿಯಂತ್ರಣ ಮತ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಟು ವಲಯಗಳಿಗೆ ಎಂಟು ಮಂದಿ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲು ತೀರ್ಮಾನಿಸಿದೆ.

ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಕೆ.ಗೋಪಾಲಯ್ಯ, ಎಸ್.ಸುರೇಶ್ ಕುಮಾರ್, ಬೈರತಿ ಬಸವರಾಜು ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಅವರಿಗೆ ಜವಾಬ್ದಾರಿ ನೀಡಲು ಗುರುವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಸಂಪುಟ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಮಾಧುಸ್ವಾಮಿ, ಬೆಂಗಳೂರು ನಗರದಲ್ಲಿ ಕೊರೋನ ಸೋಂಕಿನ ನಿಯಂತ್ರಣಕ್ಕೆ ಸರಕಾರ ಕ್ರಮ ವಹಿಸಿದೆ. ಅಲ್ಲದೆ, ಜಿಲ್ಲಾಸ್ಪತ್ರೆಗಳಲ್ಲಿ ವೆಂಟಿಲೇಟರ್‍ಗಳ ಹೆಚ್ಚಳದ ಜೊತೆಗೆ ಹೈಫ್ಲೋ ಆಕ್ಸಿಜನ್ ವ್ಯವಸ್ಥೆಗೆ ಮೂಲ ಸೌಕರ್ಯ, ಹಾಸಿಗೆಗಳು ಸೇರಿದಂತೆ ವಿವಿಧ ಕಾಮಗಾರಿಗೆ 207 ಕೋಟಿ ರೂ. ಮಂಜೂರಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣ ಖರೀದಿ ಮತ್ತು ಪಿಠೋಪಕರಣ ಖರೀದಿಸಲು 81.99 ಕೋಟಿ ರೂ.ನೀಡಲು ಸಂಪುಟ ಅನುಮೋದನೆ ನೀಡಿದೆ. ಕೊರೋನ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಕ್ಷೌರಿಕರು, ಮಡಿವಾಳರು ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ನೀಡಲು ವಿಪತ್ತು ನಿಧಿಯನ್ನು 500 ಕೋಟಿ ರೂ.ಗಳಿಗೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ ಎಂದರು.

ಗುತ್ತಿಗೆ ವೈದ್ಯರ ನೇಮಕಾತಿ 6 ತಿಂಗಳಿಗಿಂತ ಹೆಚ್ಚು ಕೆಲಸ ಮಾಡಿರುವವರಿಗೆ ಗರಿಷ್ಠ 30 ಅಂಕ ನೀಡಲು ತೀರ್ಮಾನ. 2.5 ಅಂಕ ಪ್ರತಿ ಆರು ತಿಂಗಳಿಗೆ ನೀಡಬೇಕು. ಇದನ್ನು ಆರ್ಯುವೇದ ವೈದ್ಯರಿಗೆ ನೀಡಬೇಕು. ನೇಮಕಾತಿಗೆ ಅವರ ಸೇವಾನುಭವ ಆಧಾರದ ಮೇಲೆ ಅಂಕ ನೀಡಲು ತೀರ್ಮಾನ ಆಯುಷ್ ವೈದ್ಯರಿಗೂ ನೀಡಲಾಗುವುದು. ಹಿಂದಿನ ಸಭೆಯಲ್ಲಿ 2 ಅಂಕ ಮತ್ತು ಗರಿಷ್ಠ 20 ಎಂದು ತೀರ್ಮಾನಿಸಲಾಗಿತ್ತು. 21ರಿಂದ 26ರ ವರೆಗೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News