ದೇಶದಲ್ಲಿ ಕೋವಿಡ್ ನಾಗಾಲೋಟ: ಒಂದೇ ದಿನ 26,500 ಪಾಸಿಟಿವ್, 477 ಮಂದಿ ಸೋಂಕಿಗೆ ಬಲಿ

Update: 2020-07-10 04:14 GMT

ಹೊಸದಿಲ್ಲಿ: ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಒಂದೇ ದಿನ 25 ಸಾವಿರ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾದ ಮರುದಿನವೇ ಮತ್ತೊಂದು ಹೊಸ ದಾಖಲೆ ನಿರ್ಮಾಣವಾಗಿದ್ದು, ಗುರುವಾರ ದೇಶದಲ್ಲಿ 26,500 ಹೊಸ ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ 24 ಗಂಟೆಗಳಲ್ಲಿ 477 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ದೇಶದ ಒಟ್ಟು ಸೋಂಕಿತರ ಸಂಖ್ಯೆ 8 ಲಕ್ಷದ ಗಡಿಗೆ ಸನಿಹವಿದ್ದು, ಗುರುವಾರ ರಾತ್ರಿ ವೇಳೆಗೆ 7.94 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಸೋಂಕಿಗೆ 21,578 ಮಂದಿ ಪ್ರಾಣ ತೆತ್ತಿದ್ದಾರೆ. ಗುಣಮುಖರಾದವರ ಸಂಖ್ಯೆ 4.95 ಲಕ್ಷಕ್ಕೇರಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ 2.77 ಲಕ್ಷದಷ್ಟಿದೆ. ಮರಣ ಪ್ರಮಾಣ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಒಂದು ವಾರದಲ್ಲಿ ಪ್ರತಿದಿನ ಸರಾಸರಿ 485 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಹಿಂದಿನ ಒಂದು ವಾರದಲ್ಲಿ ಸರಾಸರಿ 417 ಮಂದಿ ಮೃತಪಟ್ಟಿದ್ದಾರೆ. ಅದಕ್ಕೂ ಹಿಂದಿನ ವಾರ ದಿನಕ್ಕೆ 395 ಮಂದಿಯಂತೆ ಮೃತಪಟ್ಟಿದ್ದಾರೆ.

ಗುರುವಾರ ಮಹಾರಾಷ್ಟ್ರದಲ್ಲಿ ಎರಡನೇ ಗರಿಷ್ಠ (6875) ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶ (1248) ಹಾಗೂ ಬಿಹಾರ (704) ಕೂಡಾ ಗರಿಷ್ಠ ಪ್ರಕರಣಗಳನ್ನು ಕಂಡಿವೆ. ಕರ್ನಾಟಕ (2228), ಆಂಧ್ರಪ್ರದೇಶ (1555) ಬಂಗಾಳ (1088), ಗುಜರಾಥ್ (861), ಒಡಿಶಾ (577) ರಾಜ್ಯಗಳಲ್ಲೂ ಪ್ರಕರಣ ಏರುಗತಿಯಲ್ಲಿದೆ. ಮಹಾರಾಷ್ಟ್ರ ಹಾಗೂ ದೆಹಲಿ ಬಳಿಕ 2000ಕ್ಕೂ ಹೆಚ್ಚು ಸಾವು ಸಂಭವಿಸಿದ ಮೂರನೇ ರಾಜ್ಯವಾಗಿ ಗುಜರಾತ್ ಸೇರ್ಪಡೆಯಾಗಿದೆ.

ಕೋವಿಡ್-19 ಸಾಂಕ್ರಾಮಿಕದ ಯಶಸ್ವಿ ನಿಭಾವಣೆಯಿಂದ ಶ್ಲಾಘನೆಗೆ ಒಳಗಾಗಿದ್ದ ಬೆಂಗಳೂರಿನಲ್ಲಿ ಗುರುವಾರ ಮುಂಬೈ ಹಾಗೂ ಚೆನ್ನೈ ನಗರಗಳಿಗಿಂತಲೂ ಅಧಿಕ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 1373 ಪ್ರಕರಣ ವರದಿಯಾಗಿದ್ದರೆ, ಮುಂಬೈ ಹಾಗೂ ಚೆನ್ನೈನಲ್ಲಿ ಕ್ರಮವಾಗಿ 1268 ಮತ್ತು 1216 ಪ್ರಕರಣಗಳು ದೃಢಪಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News