ಸುದ್ದಿ ಹೀಗಿರಬೇಕೆಂದು ವಾಟ್ಸ್ ಆ್ಯಪ್ ನಲ್ಲಿ ಹಿರಿಯ ಪತ್ರಕರ್ತರಿಗೆ ಬಂದಿದ್ದ 15 ಸೂಚನೆಗಳಿವು!

Update: 2020-07-10 10:05 GMT

ಒಂದು ಕಾಲದಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಪತ್ರಕರ್ತರನ್ನು ‘ವೈಭವೀಕೃತ ಸ್ಟೆನೊಗ್ರಾಫರ್’ಗಳು ಎಂಬುದಾಗಿ ಕರೆದಿದ್ದರು. ಆದರೆ, ಆ ಬಣ್ಣನೆಯಲ್ಲಿ ಸ್ವಲ್ಪ ಶ್ರಮದ ಘನತೆಯಾದರೂ ಇತ್ತು. ಯಾಕೆಂದರೆ, ಸ್ಟೆನೊಗ್ರಾಫರ್ ಗಳು ತಮಗೆ ಹೇಳಿದ್ದನ್ನು ಕೈಯಿಂದ ಬರೆದುಕೊಳ್ಳುತ್ತಿದ್ದರು ಹಾಗೂ ಬಳಿಕ ಅದನ್ನು ವಿವರವಾಗಿ ಬರೆಯುವ ಶ್ರಮವೂ ಇತ್ತು.

ಆದರೆ ಈಗ ಪತ್ರಕರ್ತರಿಗಿದ್ದ ಆ ಎಳ್ಳಷ್ಟಾದರೂ ಗೌರವವೂ ಹೋಗಿದೆ. “ಹೆಡ್‍ಲೈನ್ ಮ್ಯಾನೇಜ್‍ ಮೆಂಟ್’ (ಸುದ್ದಿ ಹೇಗೆ ಬರಬೇಕು ಎನ್ನುವುದನ್ನು ನಿರ್ಧರಿಸುವುದು)ನಿಂದಾಗಿ ಈಗ ಕೀಬೋರ್ಡ್‍ಗೆ ಹೆಚ್ಚು ಕೆಲಸವೇ ಇಲ್ಲದಂತಾಗಿದೆ. ಇಂದಿನ ದಿನಗಳಲ್ಲಿ ಓರ್ವ ಪತ್ರಕರ್ತನಿಗೆ ಗೊತ್ತಿರಬೇಕಾದ್ದು, ಮುಖ್ಯವಾಗಿ ಗೊತ್ತಿರಬೇಕಾಗಿರುವುದು ಕೀಬೋರ್ಡ್‍ ನ 'ಎ' (ಟೆಕ್ಸ್ಟ್ ಸೆಲೆಕ್ಟ್ ಮಾಡುವುದು), 'ಸಿ' (ಕಾಪಿ ಮಾಡುವುದು), 'ಎಕ್ಸ್' (ಕಟ್ ಮಾಡುವುದು) ಮತ್ತು 'ವಿ' (ಪೇಸ್ಟ್ ಮಾಡುವುದು)- ಈ ಅಕ್ಷರಗಳು ಮಾತ್ರ ಎಂಬ ಪರಿಸ್ಥಿತಿ ಉಂಟಾಗಿದೆ.

......................

ಗಡಿ ವಿವಾದದ ಬಗ್ಗೆ ಜೂನ್ 19ರಂದು ನಡೆದ ಸರ್ವಪಕ್ಷ ಸಭೆಯ ಬಳಿಕ, ಮಾಧ್ಯಮಗಳಿಗೆ ಪ್ರಧಾನಿ ಕಚೇರಿಯಿಂದ ಪೂರೈಸಲಾದ ಒಂಬತ್ತು ಅಂಶಗಳ ಟಿಪ್ಪಣಿಯೊಂದನ್ನು ಎನ್‍ ಡಿಟಿವಿ ಪತ್ರಕರ್ತ ಅರವಿಂದ್‍ ಗುಣಶೇಖರ್ ಟ್ವೀಟ್ ಮಾಡಿದರು. ಈ ಸೂಚನೆಗಳನ್ನು ಸರ್ವಪಕ್ಷ ಸಭೆ ನಡೆಯುತ್ತಿದ್ದ ಹಾಗೆಯೇ ಪೂರೈಸಲಾಯಿತು ಎಂದು ಅವರು ಹೇಳಿದರು.

ಈ ಸೂಚನೆಗಳು ಪ್ರಧಾನಿಯನ್ನು ಹೊಗಳುತ್ತಿದ್ದವು, ಕಾಂಗ್ರೆಸ್ಸನ್ನು ಟೀಕಿಸುತ್ತಿದ್ದವು ಹಾಗೂ ಪ್ರತಿಪಕ್ಷಗಳನ್ನು ವಿಭಜಿಸುವ ಉದ್ದೇಶವನ್ನು ಹೊಂದಿದ್ದವು. ಹಾಗೂ ಈ ಎಲ್ಲ ಅಂಶಗಳನ್ನು ಅನಾಮಧೇಯ ‘ಸರಕಾರಿ ಮೂಲಗಳು ತಿಳಿಸಿವೆ’ಎಂದು ಹೇಳಬೇಕಾಗಿತ್ತು.

ಟಿವಿ ಪರದೆಗೆ ಹೊಂದಿಕೊಳ್ಳುವ ಈ ಅಂಶಗಳು ಯೋಚನೆ ಮಾಡದ ಬೀಟ್ ಪತ್ರಕರ್ತರಿಗೆ ಯಥೇಚ್ಛವಾಗಿದ್ದವು. ಅಂಥ ಪತ್ರಕರ್ತರು ಕೇವಲ ತಮ್ಮ ಹೆಬ್ಬೆರಳನ್ನು ಅಥವಾ ಕಂಪ್ಯೂಟರ್‍ ನ ನಾಲ್ಕು ಕೀಗಳನ್ನು ಬಳಸಿ ಟ್ವೀಟ್ ಮಾಡಲು ಅನುಕೂಲವಾಗಿತ್ತು.

ಮತ್ತೆ ಇತ್ತೀಚೆಗೆ ಅದೇ ವಿದ್ಯಮಾನ ಪುನರಾವರ್ತನೆಯಾಯಿತು. ಫೋನ್‍ ಕರೆಯೊಂದರ ಬಳಿಕ, ಗಲ್ವಾನ್‍ ಕಣಿವೆಯಲ್ಲಿ ಭಾರತ ಮತ್ತು ಚೀನಾ ಪಡೆಗಳು ‘ಪರಸ್ಪರ ಹಿಂದಕ್ಕೆ ಸರಿದವು’ ಎಂಬ ಹೇಳಿಕೆಯ ವಿಷಯದಲ್ಲೂ ಇದೇ ರೀತಿಯ ಗಿಮಿಕ್ ನಡೆಯಿತು, ವಾಟ್ಸ್‍ಆ್ಯಪ್‍ ಗ್ರೂಪೊಂದರಲ್ಲಿರುವ ಹಿರಿಯ ಪತ್ರಕರ್ತರು ಮತ್ತು ಸಂಪಾದಕರಿಗೆ ಇನ್ನೊಂದು ಕಂತಿನ ಸೂಚನೆಗಳನ್ನು ಕಳುಹಿಸಲಾಯಿತು. ‘ಮೂಲಗಳು ತಿಳಿಸಿವೆ’ ಎಂಬುದಾಗಿ ಮತ್ತೊಮ್ಮೆ ವರದಿ ಮಾಡಬೇಕಾದ ಅನಿವಾರ್ಯತೆ!

ಪತ್ರಕರ್ತರಿಗೆ ನೀಡಲಾದ ಆ ಸೂಚನೆಗಳು ಹೀಗಿದ್ದವು:

►ಮೋದಿ ಪರಿಣಾಮ ಸ್ಪಷ್ಟ

►ವಿಸ್ತರಣಾವಾದಿ ಚೀನಾವನ್ನು ಪಳಗಿಸುವುದು ಭಾರಿ ಕಷ್ಟ, ಆದರೆ ಸರಿಯಾದ ತಂತ್ರೋಪಾಯಗಳು ಮತ್ತು ಕಾರ್ಯಗಳಿಂದ ಅಮೋಘ ಫಲಿತಾಂಶ ಸಾಧ್ಯ.

►ಚೀನಾ ಹಿಂದೆ ಸರಿದಿಲ್ಲ, ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ನಾಯಕನ ನೇತೃತ್ವದ ದೇಶವು ಅದನ್ನು ಹಿಂದಕ್ಕೆ ದೂಡಿದೆ.

►ಹಿಂದಿನ ದೃಷ್ಟಾಂತಗಳ ಆಧಾರದಲ್ಲಿ, ಭಾರತವು ಮೃದುವಾಗಿರುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡು ಚೀನಾ ಬಂದಿತ್ತು. ಆದರೆ, ತಾವು ನರೇಂದ್ರ ಮೋದಿಯ ಹೊಸ ಭಾರತದೊಂದಿಗೆ ವ್ಯವಹರಿಸುತ್ತಿದ್ದೇವೆ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಿತು.

►ಇದು ಸ್ನೇಹಿತರನ್ನು ಆಲಂಗಿಸಲು ಹಾಗೂ ವಿರೋಧಿಗಳನ್ನು ದೂರ ತಳ್ಳಲು ಗೊತ್ತಿರುವ ಭಾರತ ಎನ್ನುವುದನ್ನು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

►ನಿರ್ಣಾಯಕ ಸೇನಾ, ಆರ್ಥಿಕ ಮತ್ತು ಆಯಕಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಪ್ರಧಾನಿ ಮೋದಿ ಚೀನಾವನ್ನು ಹಿಂದಕ್ಕೆ ಅಟ್ಟಿದ್ದಾರೆ.

►ಚೀನಾದ ಬಗ್ಗೆ ಪ್ರಧಾನಿ ಮೋದಿಯ ನಿಲುವು ಮೊದಲ ದಿನದಿಂದಲೇ ಸ್ಪಷ್ಟವಾಗಿತ್ತು.

►ಭಾರತದ ಸಾರ್ವಭೌಮತೆಯೊಂದಿಗೆ ಯಾವುದೇ ರಾಜಿಯಿಲ್ಲ.

►ವಿದೇಶ ವ್ಯವಹಾರಗಳ ಸಚಿವರಿಂದ ಹಿಡಿದು ರಾಷ್ಟ್ರೀಯ ಭದ್ರತಾ ಸಲಹೆಗಾರರವರೆಗೆ ಇಡೀ ಆಡಳಿತ ವ್ಯವಸ್ಥೆಯನ್ನು ಇದರಲ್ಲಿ ತೊಡಗಿಸಲಾಗಿತ್ತು.

► ಭಾರತದ ನಿಲುವನ್ನು ತಿಳಿಸಲು ಭಾರತೀಯ ರಾಯಭಾರ ಕಚೇರಿಗಳು ಮತ್ತು ಭಾರತೀಯ ವಲಸಿಗರ ಜಾಲವನ್ನು ಬಳಸಲಾಗಿತ್ತು. ಆ ಬಳಿಕ, ರಿಕ್ ಸ್ಕಾಟ್, ಮಾರ್ಕೊ ರೂಬಿಯೊ, ಟಾಮ್‍ ಕಾಟನ್, ಎಲಿಯಟ್‍ ಎಂಜೆಲ್, ಆ್ಯಮಿ ಬೇರಾ ಮುಂತಾದ ಅಮೆರಿಕದ ಕಾಂಗ್ರೆಸ್‍ನ ನಾಯಕರು ಹಾಗೂ ಸೆನೆಟರ್‍ ಗಳು ಚೀನಾದ ಪಿತೂರಿಗಳ ವಿರುದ್ಧ ಮಾತನಾಡಿದರು.

►ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಲಾಗಿದೆ.

►ಪ್ರಧಾನಿಯವರ ಭಾಷಣದಿಂದ ಸೈನಿಕ ನೈತಿಕ ಸ್ಥೈರ್ಯ ಹೆಚ್ಚಿದೆ.

►ಪ್ರಧಾನಿಯ ಆತ್ಮ ನಿರ್ಭರ ಭಾರತ ಕರೆಯಿಂದ ಚೀನಾದ ದೋಷರಹಿತತೆಯ ಆರ್ಥಿಕತೆಯ ಕಲ್ಪನೆಗೆ ಬಲವಾದ ಹೊಡೆತ ಬಿದ್ದಿದೆ.

►ಲೇಹ್ ಗೆ ಪ್ರಧಾನಿ ಮೋದಿಯ ಭೇಟಿಯು ಬಹುಶಃ ಶವ ಪೆಟ್ಟಿಗೆಯ ಮೇಲಿನ ಕೊನೆಯ ಮೊಳೆಯಾಗಿತ್ತು.

►ಹಿಂದೆ, ಡೋಕಾಲಾದಲ್ಲೂ ಪ್ರಧಾನಿ ಮೋದಿ ಹೇಗೆ ಅಸಾಧಾರಣ ತಾಳ್ಮೆ ಮತ್ತು ಶಕ್ತಿಯನ್ನು ಪ್ರದರ್ಶಿಸಿದ್ದರು ಎನ್ನುವುದನ್ನು ಜನರು ನೋಡಿದ್ದಾರೆ.

......................

ಈಗ ನಾವು ರಕ್ಷಣಾ ವಿಶ್ಲೇಷಕರ ವಿಶ್ಲೇಷಣೆಗಳನ್ನು ಪರಿಶೀಲಿಸೋಣ. ‘ಪರಸ್ಪರ ಹಿಂತೆಗೆತ’ವೆಂದರೆ ಚೀನಾವು ಭಾರತೀಯ ನೆಲವನ್ನು ಆಕ್ರಮಿಸಿರುವುದಲ್ಲದೆ ಬೇರೇನೂ ಅಲ್ಲ. ಇಡೀ ಗಲ್ವಾನ್‍ ಕಣಿವೆಯೇ ತನ್ನದು ಎಂಬ ಚೀನಾದ ಹೊಸ ತಗಾದೆಗೆ ಭಾರತ ವಿಶ್ವಾಸಾರ್ಹತೆ ತಂದುಕೊಟ್ಟಿದೆ. ಇದು ಭಾರತಕ್ಕೆ ಒಳಿತು ತರುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯಗಳನ್ನು ಪರಿಣತರು ವ್ಯಕ್ತಪಡಿಸಿದ್ದಾರೆ.

ಆದರೆ, ಈ ಪತ್ರಕರ್ತರೆಂಬ ಚಿಯರ್ ಲೀಡರ್‍ಗಳ ಏಕಘೋಷದಲ್ಲಿ ಅವರ ಮಾತುಗಳು ಉಡುಗಿ ಹೋಗಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ಕೃಪೆ: indianjournalismreview.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News