ಸ್ವಯಂಕೃತಾಪರಾಧಕ್ಕೆ ಬಲಿಯಾದ ದುಬೆ

Update: 2020-07-11 13:35 GMT

ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗಳು ಪೊಲೀಸರು ಮತ್ತು ರಾಜಕಾರಣಿಗಳ ನಡುವೆ ಕರುಳಬಳ್ಳಿಯ ಸಂಬಂಧವಿದೆ. ಒಂದನ್ನು ಮುಟ್ಟಿದರೆ ಇನ್ನೊಂದು ನೋಯುತ್ತದೆ. ಈ ಅಂತರ್ ಸಂಬಂಧ ಇಲ್ಲಿನ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಹೀಗಿರುವಾಗಲೂ ಒಬ್ಬ ಕುಖ್ಯಾತ ಕ್ರಿಮಿನಲ್‌ನ ಮೇಲೆ ಪೊಲೀಸರ ಕೆಂಗಣ್ಣು ಬಿದ್ದಿದೆಯೆಂದರೆ, ಖಾಕಿ ವ್ಯವಸ್ಥೆಗೆ ತಮ್ಮ ಕರ್ತವ್ಯ ನೆನಪಾಗಿದೆಯೆಂದರೆ, ಸರಕಾರ ಸಾಕಿದ ರೇಬಿಸ್ ನಾಯಿ ಇದೀಗ ಸರಕಾರವನ್ನೇ ಕಚ್ಚಲು ಮುಂದಾಗಿದೆ ಎಂದು ನಾವು ಭಾವಿಸಬೇಕು. ಉತ್ತರ ಪ್ರದೇಶದ ಕುಖ್ಯಾತ ಪಾತಕಿ ವಿಕಾಸ್ ದುಬೆ ವಿಷಯದಲ್ಲೂ ಇದೇ ಸಂಭವಿಸಿದೆ. ಅಲ್ಲಿನ ಸರಕಾರಕ್ಕೆ ವಿಕಾಸ್ ದುಬೆಯ ಅಗತ್ಯ ಮುಗಿದಿದೆ. ಆತನಿರುವುದೇ ಕೆಲವೊಮ್ಮೆ ಸರಕಾರಕ್ಕೆ ತಲೆನೋವಾಗುವ ಸಾಧ್ಯತೆಗಳಿದ್ದುದರಿಂದ, ಆತನನ್ನು ಬಾಯಿ ಮುಚ್ಚಿಸುವುದು ಪ್ರಭುತ್ವದೊಳಗಿರುವ ಕೆಲವು ಶಕ್ತಿಗಳಿಗೆ ಅನಿವಾರ್ಯವಾಗಿರಬೇಕು.

ಕಳೆದ ವಾರದಿಂದ ದುಬೆ ವಿರುದ್ಧ ನಡೆಯುತ್ತಿರುವ ಪೊಲೀಸ್ ಕಾರ್ಯಾಚರಣೆ, ಅದು ಪಡೆದುಕೊಂಡ ತಿರುವುಗಳು, ದುಬೆಯ ಬರ್ಬರ ಹತ್ಯೆಯೊಂದಿಗೆ ಕ್ಲೈಮಾಕ್ಸ್ ತಲುಪಿದೆ. 70ರ ದಶಕದ ಮೂರನೇ ದರ್ಜೆಯ ಮಸಾಲೆ ಸಿನೆಮಾದ ಶೈಲಿಯಲ್ಲಿ ಪ್ರಕರಣವನ್ನು ಪೊಲೀಸರು ಮುಗಿಸಿದ್ದಾರೆ. ಚಿತ್ರ-ಕತೆ, ನಿರ್ದೇಶನ ಎಲ್ಲವೂ ಅತ್ಯಂತ ಕಳಪೆಯಿಂದ ಕೂಡಿದ್ದರೂ, ‘ಸಿ’ ದರ್ಜೆಯ ಪ್ರೇಕ್ಷಕರಿಂದ ಆದಿತ್ಯನಾಥ್ ಸರಕಾರ ವ್ಯಾಪಕ ಶಿಳ್ಳೆಗಳನ್ನು ಹೊಡೆಸಿಕೊಳ್ಳುತ್ತಿದೆ.

ಎಲ್ಲವೂ ಸರಿಯಾಗಿ ನಡೆದಿದ್ದರೆ, ಒಂದು ವಾರದ ಹಿಂದೆಯೇ ದುಬೆ ಎನ್‌ಕೌಂಟರ್‌ಗೆ ಬಲಿಯಾಗಬೇಕಾಗಿತ್ತು. ಪೊಲೀಸರು ಸಕಲ ಸಿದ್ಧತೆಗಳ ಜೊತೆಗೇ ಅಂದು ತೆರಳಿದ್ದರು. ಆದರೆ ಪೊಲೀಸ್ ಇಲಾಖೆಯೊಳಗಿರುವ ವ್ಯಕ್ತಿಗಳೇ ನೀಡಿದ ಮಾಹಿತಿಯಿಂದಾಗಿ ಹತ್ಯೆಗೈಯಲು ಮುಂದಾದವರೇ ಗ್ಯಾಂಗ್‌ಸ್ಟರ್‌ಗಳಿಂದ ಹತ್ಯೆಗೊಳಗಾದರು. ಎಂತಹ ಪಾತಕಿಯಾದರೂ, ಪೊಲೀಸರ ವಿರುದ್ಧ ಕೋವಿ ಎತ್ತಲೂ ಹಲವು ಬಾರಿ ಯೋಚಿಸುತ್ತಾನೆ. ವಿವಿಧ ರಾಜಕಾರಣಿಗಳೊಂದಿಗೆ ಅಂತರ್ ಸಂಬಂಧ ಇಟ್ಟುಕೊಂಡು ಬಂದಿದ್ದ ದುಬೆ, ಅಷ್ಟು ಸುಲಭದಲ್ಲಿ ಪೊಲೀಸರ ವಿರುದ್ಧ ಕೋವಿ ಎತ್ತಲಾರ. ಈ ಬಾರಿ ಪೊಲೀಸರು ತನ್ನನ್ನು ಕೊಲ್ಲುವುದಕ್ಕಾಗಿಯೇ ಬಂದಿದ್ದಾರೆ ಎನ್ನುವುದು ಮನವರಿಕೆಯಾಗಿ, ಅಂತಿಮ ಆಯ್ಕೆಯಾಗಿ ಆತ ಮತ್ತು ಆತನ ತಂಡ ಕೋವಿಯೆತ್ತಿರಬಹುದು. ಪೊಲೀಸರಿಗೂ ಈ ಪ್ರತಿದಾಳಿ ಅನಿರೀಕ್ಷಿತವೇ. ಇಲ್ಲವಾದರೆ, ಅಷ್ಟು ಸುಲಭದಲ್ಲಿ ದುಬೆ ಕೋವಿಗೆ ಪೊಲೀಸರು ಪಟಪಟನೆ ಉದುರಿ ಬೀಳುತ್ತಿರಲಿಲ್ಲ. ಇದಕ್ಕೆ ಪೂರಕವಾಗಿ, ಪೊಲೀಸ್ ಇಲಾಖೆಯಿಂದಲೇ ದುಬೆಗೆ ಈ ಬಗ್ಗೆ ಮಾಹಿತಿ ದೊರಕಿರುವುದು ಬಳಿಕ ಮಾಧ್ಯಮಗಳಲ್ಲಿ ಬಯಲಾಯಿತು. ‘ಪೊಲೀಸರನ್ನು ಕೊಲ್ಲಲು ವಿಕಾಸ್ ದುಬೆಗೆ ಸಹಕರಿಸಿದ ದೇಶದ್ರೋಹಿ ಪೊಲೀಸರನ್ನು ಶಿಕ್ಷಿಸಿ’ ಎಂದು ಈಗಾಗಲೇ ಮೃತಪೊಲೀಸರ ಕುಟುಂಬಗಳು ಆಗ್ರಹಿಸಿವೆ.

ವಿಕಾಸ್ ದುಬೆಯನ್ನು ಕೊಂದು ಹಾಕಲು ಬಲವಾದ ಕಾರಣವೊಂದರ ಅವಶ್ಯಕತೆಯಿರುವುದರಿಂದ, ಎಂಟು ಪೊಲೀಸರನ್ನು ಉದ್ದೇಶಪೂರ್ವಕವಾಗಿ ಬಲಿಕೊಡಲಾಯಿತೇ? ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಿಂದ ದುಬೆ ಪರಾರಿಯಾಗಲು ಅಷ್ಟು ಸುಲಭದಲ್ಲಿ ಹೇಗೆ ಸಾಧ್ಯವಾಯಿತು? ಎನ್ನುವ ಕುರಿತಂತೆಯೂ ಸಂಶಯಗಳು ಎದ್ದಿವೆ. ಮಧ್ಯ ಪ್ರದೇಶದ ಉಜ್ಜೈನ್ ದೇವಸ್ಥಾನವೊಂದರಲ್ಲಿ ದುಬೆಯ ಬಂಧನವಾದಾಗಲೇ, ಮಾಧ್ಯಮಗಳು ಆತನನ್ನು ಎನ್‌ಕೌಂಟರ್ ಮಾಡಲಾಗುತ್ತದೆ ಎಂದು ಸಂಶಯಿಸಿದ್ದವು. ಆತನಿಗೆ ಭದ್ರತೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿಯನ್ನು ಮಾಡಲಾಗಿತ್ತು. ಆದರೆ ಆತನ ಬಂಧನದ ಬೆನ್ನಿಗೇ, ಅವನ ಎನ್‌ಕೌಂಟರ್ ನಡೆಯಲೇಬೇಕು ಎಂದು ಆಶಿಸುತ್ತಿದ ಶ್ರೀಸಾಮಾನ್ಯ ವರ್ಗವೊಂದೂ ಈ ದೇಶದಲ್ಲಿತ್ತು. ಎಂಟು ಪೊಲೀಸರ ಹತ್ಯೆಗೆ ಪ್ರತಿಯಾಗಿ ನಡೆಸುವ ‘ಸಿನೆಮಾ ಶೈಲಿ’ಯ ಸೇಡಿನ ಕ್ಲೈಮಾಕ್ಸ್ ಒಂದನ್ನು ಸೃಷ್ಟಿಸಿ ಪೊಲೀಸರು ಜನರನ್ನು ಸಂತೃಪ್ತಿ ಪಡಿಸಿದರೆ? ಎನ್ನುವುದು ಇನ್ನೊಂದು ಪ್ರಶ್ನೆ. ದುಬೆಯನ್ನು ಪೊಲೀಸರು ಎಷ್ಟು ಸುಲಭದಲ್ಲಿ ಎನ್‌ಕೌಂಟರ್ ಮಾಡಿ ಮುಗಿಸಿದರೆಂದರೆ, ನ್ಯಾಯಾಂಗವನ್ನು ನಂಬಿಸಬೇಕಾದ ಒಂದು ಬಿಗಿಯಾದ ಕಾರಣವನ್ನು ಒದಗಿಸುವ ಅಗತ್ಯವೂ ಅವರಿಗೆ ಕಂಡು ಬರಲಿಲ್ಲ. ಇಡೀ ದೇಶ ಈ ಹತ್ಯೆಯನ್ನು ಬಯಸುತ್ತಿದೆ ಎನ್ನುವ ರೂಪದಲ್ಲಿ ಅವರು ಪ್ರಕರಣವನ್ನು ಮುಗಿಸಿ, ಸಿನಿಮಾ ಹೀರೋಗಳಂತೆ ವಿಜೃಂಭಿಸಿದರು.

ಪರಿಣಾಮವಾಗಿ ಈಗಾಗಲೇ, ಎನ್‌ಕೌಂಟರ್ ಲೋಪದೋಷಗಳನ್ನು ಒಂದೊಂದಾಗಿ ಮಾಧ್ಯಮಗಳು ಎತ್ತಿ ತೋರಿಸುತ್ತಿವೆ. ದುಬೆಯ ಹತ್ಯೆಯನ್ನು ಕೆಲವು ಮಾನವ ಹಕ್ಕು ಸಂಘಟನೆಗಳ ಮುಖ್ಯಸ್ಥರು ಮತ್ತು ರಾಜಕೀಯ ನಾಯಕರು ಪ್ರಶ್ನಿಸುತ್ತಿದ್ದಾರೆ. ಗಂಭೀರ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಯಾವ ದೇಶದಲ್ಲಿ, ಲಾಕ್‌ಡೌನ್ ನಿಯಮಗಳನ್ನು ಪಾಲಿಸಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಕ್ರಿಮಿನಲ್ ಹಿನ್ನ್ನೆಲೆಯೇ ಇಲ್ಲದ ತಂದೆ-ಮಗನನ್ನು ಪೊಲೀಸರು ಲಾಕಪ್‌ನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸುತ್ತಾರೆಯೋ ಆ ದೇಶದಲ್ಲಿ ನಾವು ದುಬೆಯ ಹತ್ಯೆಯನ್ನು ಪ್ರಶ್ನಿಸುತ್ತಿದ್ದೇವೆ ಎನ್ನುವ ಪ್ರಜ್ಞೆಯೂ ನಮಗಿರಬೇಕು. ಸಿಎಎ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದರೆಂಬ ಆರೋಪದಲ್ಲಿ ಅಮಾಯಕರನ್ನು ಪೊಲೀಸರೇ ಗುಂಡೆಸೆದು ಹತ್ಯೆಗೈದ ರಾಜ್ಯದಲ್ಲಿ ನಾವು ‘ದುಬೆಯ ನಕಲಿ ಎನ್‌ಕೌಂಟರ್’ಗೆ ಸಂಬಂಧಿಸಿ ನ್ಯಾಯ ಸಿಗಬೇಕು ಎಂದು ಬಯಸುತ್ತಿದ್ದೇವೆ. ಸಿಎಎ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಲು ಪೊಲೀಸರಿಗೆ ಬಹಿರಂಗವಾಗಿಯೇ ಕರೆ ಕೊಟ್ಟ ಮುಖ್ಯಮಂತ್ರಿಯ ನಾಡಿನಲ್ಲಿ ಕ್ರಿಮಿನಲ್ ಒಬ್ಬನ ನಕಲಿ ಎನ್‌ಕೌಂಟರ್ ಕುರಿತಂತೆ ತಲೆಕೆಡಿಸಿಕೊಳ್ಳುವುದು ಒಂದು ವ್ಯಂಗ್ಯವೇ ಆಗಿದೆ. ಒಂದು ರಾಜ್ಯದ ಮುಖ್ಯಮಂತ್ರಿಯ ಹಿಂದಿನ ಜಾತಕಗಳನ್ನು ಬಿಡಿಸಿದರೆ ಅದರಲ್ಲಿ ಸರಣಿ ಕ್ರಿಮಿನಲ್ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಅಂತಹ ಮುಖ್ಯಮಂತ್ರಿ ಆಳುತ್ತಿರುವ ನಾಡಿನಲ್ಲಿ, ನಾವು ಒಬ್ಬ ಕ್ರಿಮಿನಲ್‌ನ ನಕಲಿ ಎನ್‌ಕೌಂಟರ್ ಬಗ್ಗೆ ಸತ್ಯಾಸತ್ಯತೆಗಳನ್ನು ಅರಿಯಲು ಬಯಸುತ್ತಿದ್ದೇವೆ. ಸಂವಿಧಾನವೆನ್ನುವುದು ನಡು ರಸ್ತೆಯಲ್ಲಿ ಎಂದೋ ನಕಲಿ ಎನ್‌ಕೌಂಟರ್‌ಗೆ ಬಲಿಯಾಗಿರುವಾಗ, ಸದ್ಯಕ್ಕೆ ನಾವು ಯಾರ ಬಳಿ ನ್ಯಾಯ ಕೇಳಬೇಕು ಎನ್ನುವುದೇ ನಮ್ಮ ಅತಿ ದೊಡ್ಡ ಸಮಸ್ಯೆ ಎನ್ನುವುದನ್ನು ಮರೆಯಬಾರದು.

ಈ ನಿಟ್ಟಿನಲ್ಲಿ ಇಂತಹದೊಂದು ನಕಲಿ ಎನ್‌ಕೌಂಟರ್ ಸಾವನ್ನು ಸ್ವತಃ ಆಹ್ವಾನಿಸಿಕೊಂಡಿದ್ದಕ್ಕಾಗಿ ನಾವು ದುಬೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ. ಬಹುಶಃ ಎಲ್ಲ ಕ್ರಿಮಿನಲ್ ಕೆಲಸಗಳನ್ನು ಕೇಸರಿ ವೇಷ ಧರಿಸಿ ಆತ ನಡೆಸಿದ್ದೇ ಆಗಿದ್ದರೆ ಇಂದು ಇಂತಹದೊಂದು ಸಾವು ಆತನಿಗೆ ಒದಗಿ ಬರುತ್ತಿರಲಿಲ್ಲವೇನೋ? ಹೆಚ್ಚೆಂದರೆ, ಈ ಹಿಂದೆ ಹಲವು ಸಂಘಪರಿವಾರ ನಾಯಕರನ್ನು ಬಾಡಿಗೆ ಗೂಂಡಾಗಳಿಂದ ಕೊಲ್ಲಿಸಿದ ಹಾಗೆ ಗುಟ್ಟಾಗಿ ಕೊಲ್ಲಿಸಲಾಗುತ್ತಿತ್ತೇ ಹೊರತು, ಇಷ್ಟೊಂದು ಹೀನಾಯವಾಗಿ ಸಾಯುವ ಸಂದರ್ಭ ಆತನಿಗೆ ಒದಗಿ ಬರುತ್ತಿರಲಿಲ್ಲ. ಸತ್ತ ಬಳಿಕ ‘ಹಿಂದುತ್ವ ನಾಯಕನ ಹತ್ಯೆ’ ಎಂದು ಮಾಧ್ಯಮಗಳ ಮುಖಪುಟದಲ್ಲಿ ಕಂಗೊಳಿಸಬಹುದಾಗಿತ್ತು. ಮೃತನ ಕುಟುಂಬಕ್ಕೆ ಒಂದಿಷ್ಟು ಪರಿಹಾರವೂ ಸಿಕ್ಕಿ ಬಿಡುತ್ತಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ಕೇಸರಿ ಬಟ್ಟೆ ಧರಿಸಿ ತನ್ನ ಕೃತ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದರೆ, ಇಷ್ಟರಲ್ಲೇ ಆತ ಉತ್ತರ ಪ್ರದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳೂ ಇದ್ದವು. ಜೊತೆಗೆ ಎಲ್ಲ ಕ್ರಿಮಿನಲ್ ಕಳಂಕದಿಂದ ಮುಕ್ತನಾಗಿ, ಪೊಲೀಸರ ಮುಖಾಂತರವೇ ತನ್ನ ಪ್ರತಿಸ್ಪರ್ಧಿಗಳನ್ನು ದಮನಿಸುವ ಅವಕಾಶವೂ ಅವನಿಗಿದ್ದವು. ಆದುದರಿಂದ, ವಿಕಾಸ್ ದುಬೆಯ ಸಾವನ್ನು ನಾವು ಸ್ವಯಂಕೃತಾಪರಾಧ ಎಂದೇ ಭಾವಿಸಿ ವೌನ ತಾಳಬೇಕಾದ ಅನಿವಾರ್ಯ ಸ್ಥಿತಿ ಇದೆ. ನಕಲಿ ಎನ್‌ಕೌಂಟರ್‌ಗಳಿಗೆ ಹಲವು ಬಾರಿ ಬಲಿಯಾಗಿರುವ ನ್ಯಾಯವ್ಯವಸ್ಥೆ ಮತ್ತು ಸಂವಿಧಾನಕ್ಕೆ ಮತ್ತೆ ಉಸಿರು ತುಂಬುವ ದಾರಿಯ ಬಗ್ಗೆ ಸಂಘಟಿತವಾಗಿ ಯೋಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News