ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆ ಜಮೀನು ಕಾಯ್ದಿರಿಸಿರುವುದು ಸ್ವಾಗತಾರ್ಹ: ಶಾಸಕ ಝಮೀರ್ ಅಹ್ಮದ್

Update: 2020-07-10 17:39 GMT

ಬೆಂಗಳೂರು, ಜು.10: ರಾಜ್ಯದಲ್ಲಿ ಕೊರೋನ ವೈರಸ್ ಹರಡುವಿಕೆಯಿಂದ ಮೃತಪಟ್ಟ ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡಲು ಸಾರ್ವಜನಿಕರ ಸ್ಮಶಾನಗಳಿಗಾಗಿ ಈಗಾಗಲೆ ಸರಕಾರವು ಬೆಂಗಳೂರಿನ 4 ತಾಲೂಕುಗಳಲ್ಲಿ ಸುಮಾರು 35 ಎಕರೆ 18 ಗುಂಟೆ ಜಮೀನನ್ನು ಕಾಯ್ದಿರಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಕೋವಿಡ್-19 ರೋಗಿಗಳ ಪ್ರಮಾಣ ಪ್ರತಿ ದಿನ ಹೆಚ್ಚಾಗುತ್ತಿದ್ದು, ಪ್ರಸ್ತುತ ಕೋವಿಡ್-19ನಿಂದ ಮೃತಪಡುತ್ತಿರುವವರ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದೆ. ಆದುದರಿಂದ, ಈ ಕೆಳಕಂಡ ಸುರಕ್ಷತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದಾರೆ.

ವಿಕ್ಟೋರಿಯಾ ಪಿಎಂಎಸ್‍ಎಸ್‍ವೈ ಆಸ್ಪತ್ರೆಯಲ್ಲಿ 30 ಐಸಿಯು, 30 ಎಚ್‍ಡಿಯು ಬೆಡ್‍ಗಳಿದ್ದು, 120 ಜನರಲ್ ಬೆಡ್ ಜೊತೆಗೆ ಆಕ್ಸಿಜನ್ ಹೊಂದಿರುತ್ತದೆ. ಉತ್ತಮವಾದ 6 ಓಟಿ, ಲ್ಯಾಬ್, ಸಿಟಿ ಸ್ಕ್ಯಾನ್, ಹಾಗೂ ಇತರೆ ಉತ್ತಮ ಸೌಲಭ್ಯಗಳನ್ನು ಹೊಂದಿರುವುದರಿಂದ ಕೋವಿಡ್-19 ರೋಗಿಗಳಿಗೆ ಬಳಸಿಕೊಳ್ಳುವುದು, ಅದೇ ಆಸ್ಪತ್ರೆಯ ಕ್ವಾರಂಟೈನ್‍ನಲ್ಲಿರುವ ವೈದ್ಯರನ್ನು ಹತ್ತಿರದ ಹೊಟೇಲ್‍ಗಳಿಗೆ ಸ್ಥಳಾಂತರಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದಾರೆ.

ಕೋವಿಡ್-19 ಪರೀಕ್ಷೆ ವರದಿ ನೀಡುವಲ್ಲಿ ವಿಳಂಬವಾಗುತ್ತಿರುವುದರಿಂದ, ಸಾರ್ವಜನಿಕರಲ್ಲಿ ಆತಂಕ ಹಾಗೂ ಭಯದ ವಾತಾವರಣವುಂಟಾಗಿದೆ. ಆದಷ್ಟು ಬೇಗ ಕೋವಿಡ್ ಪರೀಕ್ಷೆಯ ವರದಿಯನ್ನು ನೀಡಲು ಅನುಕೂಲವಾಗುವಂತೆ ಹೆಚ್ಚಿನ ಲ್ಯಾಬ್‍ಗಳು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕೋವಿಡ್-19 ರೋಗಿಗಳ ಮೃತಪಡುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಮೃತದೇಹಗಳನ್ನು ಸಾಗಿಸಲು ಹೆಚ್ಚಿನ ವಿಶೇಷ ಅಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಬೇಕು. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿದ್ದು, ಬಡ ರೋಗಿಗಳಿಗೆ ಇದರಿಂದ ಹೊರೆಯಾಗುತ್ತಿದ್ದು, ಶುಲ್ಕವನ್ನು ನಿಗದಿಪಡಿಸುವುದನ್ನು ಮರು ಪರಿಶೀಲಿಸಬೇಕು ಎಂದು ಝಮೀರ್ ಅಹ್ಮದ್ ಖಾನ್ ಕೋರಿದ್ದಾರೆ.

ಕೋವಿಡ್-19 ರೋಗಿಗಳಿಗಿಂತ ನಾನ್-ಕೋವಿಡ್ ರೋಗಿಗಳು ಚಿಕಿತ್ಸೆ ಇಲ್ಲದೆ 10 ಪಟ್ಟು ಮರಣ ಹೊಂದುತ್ತಿದ್ದು, ಬೆಂಗಳೂರಿನ ಬಿಬಿಎಂಪಿ 198 ವಾರ್ಡ್‍ಗಳಲ್ಲಿ ನಾನ್ ಕೋವಿಡ್ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ತೆರೆಯುವುದು, ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸುವುದು ಹಾಗೂ ಅಗತ್ಯ ಸಮಯದಲ್ಲಿ ಅಕ್ಸಿಜನ್ ಸಿಲಿಂಡರ್‍ಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News