ಸೂಕ್ತ ಭದ್ರತೆಗೆ ಒತ್ತಾಯಿಸಿ ಪೌರ ಕಾರ್ಮಿಕರಿಂದ ಧರಣಿ

Update: 2020-07-10 17:50 GMT

ಬೆಂಗಳೂರು, ಜು.10: ಕೊರೋನ ವೈರಸ್ ಹರಡಿದಾಗಿನಿಂದ ಉಸಿರನ್ನು ಬಿಗಿ ಹಿಡಿದುಕೊಂಡು ಕೆಲಸ ಮಾಡುತ್ತಿದ್ದು, ಬಿಬಿಎಂಪಿ ಈ ಕೂಡಲೇ ಪೌರ ಕಾರ್ಮಿಕರಿಗೆ ಸೂಕ್ತ ಭದ್ರತೆ ಹಾಗೂ ಸಂಬಳವನ್ನು ನೇರವಾಗಿ ಕಾರ್ಮಿಕರ ಖಾತೆಗೆ ಪಾವತಿ ಮಾಡಬೇಕೆಂದು ಒತ್ತಾಯಿಸಿ ಪೌರ ಕಾರ್ಮಿಕರು ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾರ್ಮಿಕ ಮಹಿಳೆ ಲಕ್ಷ್ಮೀ ಮಾತನಾಡಿ, ಕೊರೋನ ಬಂದಿದೆ ಎಂದು ನಾವು ಮನೆಯಲ್ಲೇ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ರಸ್ತೆಗೆ ಇಳಿದು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಆದರೆ, ಸರಕಾರ, ಬಿಬಿಎಂಪಿ ನಮ್ಮ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ನೋವು ನಮ್ಮನ್ನು ಕಾಡುತ್ತಿದೆ. ಹೀಗಾಗಿ, ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪೌರ ಕಾರ್ಮಿಕರಿಗೆ ಸುರಕ್ಷಾ ಕವಚ ನೀಡಬೇಕು. ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ ಸಿಲುಕಿರುವ ಕಾರ್ಮಿಕರು ಕೆಲಸಕ್ಕೆ ಬಾರದಿದ್ದರೆ, ಅವರಿಗೆ ಪೂರ್ತಿ ಸಂಬಳ ನೀಡಬೇಕು. ಸಂಬಳವನ್ನು ನೇರವಾಗಿ ಕಾರ್ಮಿಕರಿಗೆ ಪಾವತಿ ಮಾಡಬೇಕೆಂದು ಒತ್ತಾಯಿಸಿದರು.

ರಸ್ತೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾಗ ಮೂಲ ಸೌಕರ್ಯವಿಲ್ಲ. ಕುಡಿಯುವ ನೀರು ಸಹ ಮನೆಯಿಂದ ತರುತ್ತಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News