ಪಿಎಂ ಕೇರ್ಸ್‌ ಫಂಡ್ ಸಂಸದೀಯ ಸಮಿತಿ ಪರಾಮರ್ಶೆಗೆ ಬಿಜೆಪಿ ತಡೆ

Update: 2020-07-11 03:36 GMT

ಹೊಸದಿಲ್ಲಿ, ಜು.11: ಮಹಾ ಲೆಕ್ಕ ಪರಿಶೋಧಕರ ವರದಿ ಸೇರಿದಂತೆ ಎಲ್ಲ ಪ್ರಮುಖ ಲೆಕ್ಕಪತ್ರಗಳ ಪರಾಮರ್ಶೆ ಮಾಡುವ ಅಧಿಕಾರ ಹೊಂದಿರುವ ಪ್ರಮುಖ ಸಂಸದೀಯ ಸಮಿತಿಯಾಗಿರುವ ಸಾರ್ವಜನಿಕ ಲೆಕ್ಕ ಸಮಿತಿ (ಪಿಎಸಿ), ಪಿಎಂ ಕೇರ್ಸ್‌ ನಿಧಿಯ ಪರಾಮರ್ಶೆ ಮಾಡುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಸ್ಥಾಪಿಸಲಾದ ಪಿಎಂ ಕೇರ್ಸ್‌ ಫಂಡ್‌ನ ಲೆಕ್ಕಪತ್ರಗಳನ್ನು ಪರಿಶೀಲಿಸುವ ಸಂಬಂಧ ಒಮ್ಮತಕ್ಕೆ ಬರಲು ಶುಕ್ರವಾರ ನಡೆದ ಪಿಎಸಿ ಸಭೆಯಲ್ಲಿ ಸಾಧ್ಯವಾಗಲಿಲ್ಲ.

ಸಮಿತಿಯ ಅಧ್ಯಕ್ಷರಾಗಿರುವ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿಯವರು, ಎಲ್ಲ ಸದಸ್ಯರು ದೇಶದ ಬಗ್ಗೆ ಚಿಂತಿಸಿ, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಮೂಲಕ ಈ ಪ್ರಮುಖ ವಿಷಯದ ಬಗ್ಗೆ ಒಮ್ಮತಕ್ಕೆ ಬರಬೇಕು ಎಂದು ಸಭೆಯಲ್ಲಿ ಮನವಿ ಮಾಡಿಕೊಂಡರು.

ಕೊರೋನ ವೈರಸ್ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸಿದ ವಿಧಾನದ ಪರಾಮರ್ಶೆ ಕುರಿತ ಚೌಧರಿ ಅವರ ಪ್ರಸ್ತಾವವನ್ನು ವಿರೋಧಿಸುವಂತೆ ಪಕ್ಷದಿಂದ ನಿರ್ದೇಶನ ಪಡೆದು ಬಂದ ಬಿಜೆಪಿ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ. ಆಡಳಿತಾರೂಢ ಬಿಜೆಪಿಯ ಎಲ್ಲ ಸದಸ್ಯರು ಸಭೆಗೆ ಹಾಜರಾಗಿದ್ದರು.

ಬಿಜು ಜನತಾದಳ ಮುಖಂಡ ಭತೃಹರಿ ಮೆಹ್ತಾನಿ ಬಿಜೆಪಿ ಬೆಂಬಲಕ್ಕೆ ನಿಂತರು. ಆದರೆ ಡಿಎಂಕೆ ಮುಖಂಡ ಟಿ.ಆರ್.ಬಾಲು ಪ್ರಸ್ತಾವಕ್ಕೆ ಬೆಂಬಲ ನೀಡಿದರೂ, ಬಿಜೆಪಿ ಬೆಂಬಲಿಗರು ಅಧಿಕ ಸಂಖ್ಯೆಯಲ್ಲಿ ಇದ್ದ ಕಾರಣ ಸಭೆ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ. ಪಿಎಂ ಕೇರ್ಸ್‌ ನಿಧಿಯ ಪರಾಮರ್ಶೆಯಾಗುವ ಬಗ್ಗೆ ಬಿಜೆಪಿಗೆ ಭೀತಿ ಇದೆ. ಇದರಿಂದ ಆಡಳಿತ ಪಕ್ಷ, ಕೊರೋನ ವೈರಸ್ ಪರಿಸ್ಥಿತಿ ನಿಭಾಯಿಸಿದ ಸರ್ಕಾರದ ಕ್ರಮದ ಪರಾಮರ್ಶೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ವಿರೋಧ ಪಕ್ಷದ ಮುಖಂಡರು ಆಪಾದಿಸಿದರು.

ಸಮಿತಿಯಲ್ಲಿ ಬಿಜೆಪಿ ಸದಸ್ಯರು ಅಧಿಕ ಸಂಖ್ಯೆಯಲ್ಲಿದ್ದು, ಹಿರಿಯ ಮುಖಂಡ ಭೂಪೇಂದರ್ ಯಾದವ್ ನೇತೃತ್ವದಲ್ಲಿ ಚೌಧರಿಯವರ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪಿಎಂ ಕೇರ್ಸ್‌ ಫಂಡ್‌ಗೆ ನೀಡಿರುವ ದೇಣಿಗೆಯನ್ನು ಸಂಸತ್ ಮಂಜೂರು ಮಾಡಿಲ್ಲ. ಆದ್ದರಿಂದ ಸಮಿತಿ ಇದರ ಪರಾಮರ್ಶೆ ಕೈಗೊಳ್ಳುವಂತಿಲ್ಲ ಎಂದು ಯಾದವ್ ವಾದಿಸಿದರು.

ರಾಷ್ಟ್ರೀಯ ತುರ್ತು ಸಂದರ್ಭಗಳಿಗೆ ನೆರವಾಗುವ ಸಲುವಾಗಿ ಪಿಎಂ ಕೇರ್ಸ್‌ ಫಂಡ್ ಸ್ಥಾಪಿಸಲಾಗಿದ್ದು, ಇದಕ್ಕೆ ವ್ಯಕ್ತಿಗಳು ಮತ್ತು ಖಾಸಗಿ ಸಂಸ್ಥೆಗಳು ದೇಣಿಗೆ ನೀಡುತ್ತವೆ. ಆದ್ದರಿಂದ ಇದನ್ನು ಸರ್ಕಾರಿ ಲೆಕ್ಕ ಪರಿಶೋಧಕರು ಪರಾಮರ್ಶಿಸುವಂತಿಲ್ಲ. ಸ್ವತಂತ್ರ ಲೆಕ್ಕ ಪರಿಶೋಧಕರು ಪರಿಶೀಲನೆ ನಡೆಸಬೇಕು ಎನ್ನುವುದು ಬಿಜೆಪಿ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News