ಯುಎಇ: ವೀಸಾ ನಿರ್ಧಾರಗಳಿಗೆ ಹಲವು ತಿದ್ದುಪಡಿ

Update: 2020-07-11 15:13 GMT

ಅಬುಧಾಬಿ (ಯುಎಇ), ಜು. 11: ನಿವಾಸಿಗಳ ಗುರುತು ಮತ್ತು ರಾಷ್ಟ್ರೀಯತೆಗೆ ಸಂಬಂಧಿಸಿ ಇತ್ತೀಚೆಗೆ ತೆಗೆದುಕೊಳ್ಳಲಾದ ನಿರ್ಧಾರಗಳಿಗೆ ಯುಎಇ ಸಚಿವ ಸಂಪುಟವು ಶುಕ್ರವಾರ ಹಲವಾರು ತಿದ್ದುಪಡಿಗಳನ್ನು ಹೊರಡಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಬಳಿಕ, ವಿವಿಧ ಕ್ಷೇತ್ರಗಳಲ್ಲಿ ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಉದ್ಯಮಗಳಿಗೆ ಪೂರಕವಾಗಿ ಈ ತಿದ್ದುಪಡಿಗಳನ್ನು ಹೊರಡಿಸಲಾಗಿದೆ ಎಂದು ಯುಎಇ ಸಚಿವ ಸಂಪುಟ ಹೊರಡಿಸಿದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ವಲಸಿಗರ ವಾಸ್ತವ್ಯ, ವೀಸಾ, ಪ್ರವೇಶ ಪರವಾನಿಗೆ ಮತ್ತು ಗುರುತು ಚೀಟಿಗಳಿಗೆ ಸಂಬಂಧಿಸಿದ ಇತ್ತೀಚೆಗೆ ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳನ್ನು ಜುಲೈ 11ರಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ. ಈ ಸೇವೆಗಳನ್ನು ಒದಗಿಸಿರುವುದಕ್ಕಾಗಿ ಜುಲೈ 12ರಿಂದ ಶುಲ್ಕ ಸಂಗ್ರಹಿಸುವ ಜವಾಬ್ದಾರಿಯನ್ನು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಏಂಡ್ ಸಿಟಿಝನ್ಶಿಪ್ (ಐಸಿಎ)ಗೆ ವಹಿಸಲಾಗಿದೆ ಎಂದು ಯುಎಇ ಸರಕಾರದ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಲಾದ ಸರಣಿ ಟ್ವೀಟ್ ಗಳು ತಿಳಿಸಿವೆ.

“ವಿನಾಯಿತಿ ಅವಧಿಗಳ ಗಡುವುಗಳು ಮುಗಿದ ಬಳಿಕ ಆಡಳಿತಾತ್ಮಕ ಶುಲ್ಕ ಮತ್ತು ದಂಡಗಳನ್ನು ಸಂಗ್ರಹಿಸಲಾಗುವುದು. ವಿನಾಯಿತಿ ಅವಧಿಯಲ್ಲಿ ಯಾವುದೇ ದಂಡವನ್ನು ಸಂಗ್ರಹಿಸುವಂತಿಲ್ಲ. ಅಥಾರಿಟಿಯು ನೀಡುವ ಎಲ್ಲ ಸೇವೆಗಳಿಗೆ ಆಡಳಿತಾತ್ಮಕ ಶುಲ್ಕಗಳು ಮತ್ತು ದಂಡಗಳನ್ನು ಸಂಗ್ರಹಿಸುವುದನ್ನು ಜುಲೈ 12ರಿಂದ ಮರುಜಾರಿಗೊಳಿಸಲಾಗಿದೆ’’ ಎಂದು ಟ್ವೀಟೊಂದು ತಿಳಿಸಿದೆ.

ತಿದ್ದುಪಡಿಗಳ ಮುಖ್ಯಾಂಶಗಳು ಹೀಗಿವೆ:

► ಯುಎಇ ಪ್ರಜೆಗಳು, ಯುಎಇಯಲ್ಲಿ ವಾಸಿಸುತ್ತಿರುವ ವಿದೇಶೀಯರು ಮತ್ತು ಯುಎಇಯಲ್ಲಿರುವ ಜಿಸಿಸಿ (ಕೊಲ್ಲಿ ಸಹಕಾರ ಮಂಡಳಿಯ ದೇಶಗಳ) ನಾಗರಿಕರು ತಮ್ಮ ದಾಖಲೆಗಳನ್ನು ನವೀಕರಿಸಲು ಮೂರು ತಿಂಗಳ ದಯಾ ಅವಧಿಯನ್ನು ನೀಡಲಾಗಿದೆ.

► ಯುಎಇಯಿಂದ ಹೊರಗೆ ಆರು ತಿಂಗಳಿಗೂ ಕಡಿಮೆ ಕಾಲ ಕಳೆದ ಯುಎಇ ಪ್ರಜೆಗಳು, ಯುಎಇಯಲ್ಲಿ ವಾಸ್ತವ್ಯವಿರುವ ವಿದೇಶೀಯರು ಮತ್ತು ಯುಎಇಯಲ್ಲಿ ವಾಸಿಸುತ್ತಿರುವ ಜಿಸಿಸಿ ಪ್ರಜೆಗಳಿಗೆ ತಮ್ಮ ದಾಖಲೆಗಳನ್ನು ನವೀಕರಿಸಲು ಅವರು ದೇಶಕ್ಕೆ ಕಾಲಿಟ್ಟ ದಿನಾಂಕದಿಂದ ಒಂದು ತಿಂಗಳವರೆಗೆ ವಿನಾಯಿತಿ ನೀಡಲಾಗುವುದು.

► ಯುಎಇಯಿಂದ ಹೊರಗೆ ತಂಗಿರುವ ಅಲ್ಲಿನ (ಯುಎಇಯ) ನಿವಾಸಿಗಳ ವಾಸ್ತವ್ಯ ವೀಸಾಗಳ ಅವಧಿ ಮಾರ್ಚ್ 1ರ ವೇಳೆಗೆ ಮುಕ್ತಾಯಗೊಂಡಿದ್ದರೆ ಅಥವಾ ಯುಎಇಯಿಂದ ಹೊರಗೆ ಆರು ತಿಂಗಳಿಗೂ ಹೆಚ್ಚಿನ ಅವಧಿಯನ್ನು ಅವರು ಕಳೆದಿದ್ದರೆ ಅವರು ದೇಶಕ್ಕೆ ಮರಳಲು ವಿನಾಯಿತಿ ಅವಧಿಯನ್ನು ನೀಡಲಾಗುತ್ತದೆ. ಈ ವಿನಾಯಿತಿ ಅವಧಿಯು ಉಭಯ ದೇಶಗಳ ನಡುವಿನ ವಿಮಾನಯಾನ ಆರಂಭಗೊಂಡ ದಿನದಿಂದ ಜಾರಿಗೆ ಬರುತ್ತದೆ. ಇದಕ್ಕೆ ಸಂಬಂಧಿಸಿದ ನಿರ್ದಿಷ್ಟ ವೇಳಾಪಟ್ಟಿಯನ್ನು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಏಂಡ್ ಸಿಟಿಝನ್ಶಿಪ್ ಬಿಡುಗಡೆ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News