ಕೇರಳದ ಚಿನ್ನ ಸಾಗಾಟ ಪ್ರಕರಣ: ಪ್ರಮುಖ ಆರೋಪಿ ಸ್ವಪ್ನಾ ಸುರೇಶ್, ಆಕೆಯ ಸಹಚರ ಬೆಂಗಳೂರಿನಲ್ಲಿ ಎನ್ಐಎ ಬಲೆಗೆ

Update: 2020-07-11 17:40 GMT
Swapna Suresh | Photo/Facebook

ಬೆಂಗಳೂರು, ಜು.11: ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಶನಿವಾರ ಮಹತ್ವದ ತಿರುವು ದೊರೆತಿದ್ದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಪ್ರಭಾ ಸುರೇಶ್ ಹಾಗೂ ಆಕೆಯ ಸಹಚರ ಸಂದೀಪ್ ನಾಯರ್ ನನ್ನು ಶನಿವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳ ಜೊತೆ ಅವರ ಕುಟುಂಬ ಸದಸ್ಯರನ್ನು ಕೂಡಾ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ತಿಳಿದುಬಂದಿದೆ. ರವಿವಾರ ಅವರನ್ನು ಕೊಚ್ಚಿಯಲ್ಲಿ ಎನ್ಐಎ ಕಚೇರಿಯಲ್ಲಿ ಹಾಜರುಪಡಿಸಲಾಗುವುದು. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಮೊದಲನೇ ಆರೋಪಿಯಾಗಿದ್ದು, ನಾಯರ್ ಮೂರನೇ ಆರೋಪಿ.

ಕೇರಳದ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ನೇಮಕಾತಿ ಪಡೆಯಲು ಸ್ವಪ್ನಾ ಸುರೇಶ್ ನಕಲಿ ಪದವಿ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾರೆಂಬ ಆರೋಪಗಳ ಬಗ್ಗೆಯೂ ಸಲ್ಲಿಸಲಾಗಿರುವ ದೂರಿನ ಬಗ್ಗೆ ತನಿಖೆ ನಡೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹೇಳಿಕೆ ನೀಡಿದ ಕೆಲವೇ ತಾಸುಗಳ ಬಳಿಕ ಸ್ವಪ್ನಾ ಅವರ ಬಂಧನವಾಗಿದೆ.

ಇತ್ತೀಚೆಗೆ ಯುಇಎನಿಂದ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿದ್ದ ರಾಜತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಬ್ಯಾಗೇಜ್ ನಲ್ಲಿ 30 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸ್ವಪ್ನಾ ಸುರೇಶ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News