ದೇಶಾದ್ಯಂತ ಕೊರೋನ ಹರಡಲು ತಬ್ಲೀಘಿಗಳೇ ಪ್ರಮುಖ ಕಾರಣ: ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2020-07-11 17:53 GMT

ಬೆಂಗಳೂರು, ಜು. 11: 'ಲೆಕ್ಕವನ್ನು ಎಲ್ಲರಿಗೂ ಕೊಟ್ಟೇ ಕೊಡುತ್ತೇವೆ. ಲೆಕ್ಕ ಕೊಡದೇ ನಾವು ಎಲ್ಲಿಯೂ ಹೋಗುವುದಿಲ್ಲ. ಕೋವಿಡ್ ಚಿಕಿತ್ಸೆ ಖರ್ಚು ವೆಚ್ಚದ ಬಗ್ಗೆ ಸರಕಾರ ಲೆಕ್ಕ ಖಂಡಿತ ಕೊಡುತ್ತದೆ. ಅದು ನ್ಯಾಯಯುತವೂ ಹೌದು. ಕಾಂಗ್ರೆಸ್‍ವರು ಲೆಕ್ಕಕೊಡಿ ಅಭಿಯಾನ ಮಾಡುವುದಕ್ಕಿಂತ ಜಾಗೃತ ಅಭಿಯಾನ ಮಾಡಿದರೆ ಒಳ್ಳೆಯದು' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಸಂಬಂಧ ಕಾಂಗ್ರೆಸ್ ಮಾಡುತ್ತಿರುವ ಆರೋಪವೆಲ್ಲವೂ ಸುಳ್ಳು. ಕೋವಿಡ್-19 ಈ ಪರಿ ಹರಡಲು ತಬ್ಲೀಘಿಗಳು ಕಾರಣ. ಅವರಿಂದಲೇ ಕೊರೋನ ಸೋಂಕು ಹರಡುತ್ತಿರುವುದು. ತಬ್ಲೀಘಿಗಳು ಬಂದ ಮೇಲೆಯೇ ಕೊರೋನ ಹೆಚ್ಚು ಹರಡಿದೆ ಎಂದು ಇದೇ ವೇಳೆ ದೂರಿದರು.

ದೇಶಾದ್ಯಂತ ತಬ್ಲೀಘಿಗಳೇ ಸೋಂಕು ಹರಡಲು ಪ್ರಮುಖ ಕಾರಣ. ಆದರೆ ಕಾಂಗ್ರೆಸ್‍ನವರು ತಬ್ಲೀಘಿಗಳಿಗೆ ಬೆಂಬಲಿಸಿ ಅವರನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕೊರೋನ ಎಂದರೂ ತಪ್ಪಾಗುವುದಿಲ್ಲ ಎಂದು ಟೀಕಿಸಿದ ಅವರು, ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರಾಜಕೀಯ ಕಾರಣಕ್ಕೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಕಾಂಗ್ರೆಸ್, ಸರಕಾರ ಜೊತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News