ಬೆಂಗಳೂರಿನಲ್ಲಿ ಮನೆ ಮನೆ ಸಮೀಕ್ಷೆ ಪೂರ್ಣ: ಕೊರೋನ ಭೀತಿಯಲ್ಲಿ ಸಾವಿರಾರು ಕುಟುಂಬಗಳು

Update: 2020-07-11 17:55 GMT

ಬೆಂಗಳೂರು, ಜು.11: ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಬಿಬಿಎಂಪಿಯು ಆರೋಗ್ಯ ಸಮೀಕ್ಷೆ ನಡೆಸಿತ್ತು. ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಸರಕಾರಿ, ಅನುದಾನಿತ, ಖಾಸಗಿ ಮತ್ತು ಪಾಲಿಕೆ ಶಾಲೆಗಳ ಶಿಕ್ಷಕರನ್ನೊಳಗೊಂಡ ಸಮೀಕ್ಷಕರ ತಂಡವನ್ನು ರಚಿಸಲಾಗಿತ್ತು. 14 ಸಾವಿರಕ್ಕಿಂತ ಹೆಚ್ಚು ಸಮೀಕ್ಷರು ಮನೆ-ಮನೆಗೆ ತೆರಳಿ ಜನರ ಆರೋಗ್ಯದ ಮಾಹಿತಿ ಕಲೆ ಹಾಕಿದ್ದಾರೆ.

ಕಳೆದ ಮೇ 10 ರಿಂದ ಆರಂಭವಾದ ಸಮೀಕ್ಷೆಯು ಜೂ. 24ರಂದು ಪೂರ್ಣಗೊಂಡಿದೆ. ಒಟ್ಟು 7340 ತಂಡಗಳು ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ಮಾಹಿತಿ ಸಂಗ್ರಹಿಸಿವೆ. ಐಎಲ್‍ಐ, ಸಾರಿ, ಅನ್ಯಕಾಯಿಲೆಯಿಂದ ನರಳುತ್ತಿರುವವರು, ವಯೋವೃದ್ಧರು, ಗರ್ಭಿಣಿಯರು, ಮಕ್ಕಳಿಗೆ ಹಾಲುಣಿಸುವ ತಾಯಂದಿರ ವಿವರ ಮತ್ತು ಸಂಪರ್ಕ ಸಂಖ್ಯೆಯನ್ನು ಕಲೆ ಹಾಕಲಾಗಿದೆ. ಈ ಸಾರ್ವತ್ರಿಕ ಆರೋಗ್ಯ ಸಮೀಕ್ಷೆ ವರದಿಯನ್ನು ಪಾಲಿಕೆಯ ಆರೋಗ್ಯ ವಿಭಾಗಕ್ಕೆ ಸಲ್ಲಿಸಲಾಗಿದೆ.

ಪ್ರಸ್ತುತ ಆರೋಗ್ಯ ವಿಭಾಗದಲ್ಲಿನ ವೈದ್ಯಾಧಿಕಾರಿಗಳ ತಂಡವು ಸೋಂಕಿನ ಭೀತಿಯಲ್ಲಿರುವ ಕುಟುಂಬಗಳು, ವಯೋವೃದ್ಧರು, ಗರ್ಭಿಣಿಯರು, ಬಾಣಂತಿಯರು, ಐಎಲ್‍ಐ, ಸಾರಿ ಮತ್ತು ಅನ್ಯ ಕಾಯಿಲೆಗಳಿಂದ ನರಳುತ್ತಿರುವವರನ್ನು ಆರೋಗ್ಯ ತಪಾಸಣೆಗೊಳಪಡಿಸುತ್ತಿದೆ. ಐಎಲ್‍ಐ, ವಯೋವೃದ್ಧರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‍ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ, ಇಂಥವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ.

ಮಾಹಿತಿ ಸಂಗ್ರಹ: ಸಮೀಕ್ಷಕರ ತಂಡವು ಪಾಲಿಕೆ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳಲ್ಲಿನ ಕುಟುಂಬಗಳ ಆರೋಗ್ಯದ ಸ್ಥಿತಿಯ ಮಾಹಿತಿ ಸಂಗ್ರಹಿಸಿವೆ. ಈ ಪೈಕಿ 21 ಕ್ಷೇತ್ರಗಳಲ್ಲಿ ತಲಾ 20 ಸಾವಿರಕ್ಕಿಂತ ಹೆಚ್ಚು ಕುಟುಂಬಗಳು ಸೋಂಕಿನ ಅಪಾಯದಲ್ಲಿರುವುದು ಗೊತ್ತಾಗಿದೆ. ಬ್ಯಾಟರಾಯನಪುರ, ಬೆಂಗಳೂರು ದಕ್ಷಿಣ, ಮಹದೇವಪುರ, ಕೆ.ಆರ್.ಪುರ, ರಾಜರಾಜೇಶ್ವರಿನಗರ, ಸರ್ವಜ್ಞನಗರ, ಬೊಮ್ಮನಹಳ್ಳಿ, ಪದ್ಮನಾಭನಗರ, ಯಶವಂತಪುರ, ದಾಸರಹಳ್ಳಿ, ಮಲ್ಲೇಶ್ವರದ ಕ್ಷೇತ್ರದಲ್ಲಿ ಹೆಚ್ಚಿನ ಕುಟುಂಬಗಳು ಅಪಾಯದ ಸ್ಥಿತಿಯಲ್ಲಿವೆ.

1.92 ಲಕ್ಷ ಮಂದಿಗೆ ಅನ್ಯ ಕಾಯಿಲೆ: ನಗರದಲ್ಲಿ 33,38,959 ಮನೆಗಳಿದ್ದು, ಈ ಪೈಕಿ ಸಮೀಕ್ಷರು ಆರೋಗ್ಯದ ಮಾಹಿತಿ ಕಲೆ ಹಾಕಲು 32.13 ಲಕ್ಷ ಮನೆಗಳಿಗೆ ಭೇಟಿ ಕೊಟ್ಟಿದ್ದರು. 30.18 ಲಕ್ಷ ಕುಟುಂಬಗಳು ಮಾತ್ರ ಆರೋಗ್ಯದ ಮಾಹಿತಿ ಹಂಚಿಕೊಂಡಿವೆ. ಸಮೀಕ್ಷಕರು ಭೇಟಿ ನೀಡಿದ್ದ ವೇಳೆ 1.99 ಮನೆಗಳಿಗೆ ಬೀಗ ಹಾಕಲಾಗಿತ್ತು. ಸಮೀಕ್ಷರ ತಂಡವು ನಡೆಸಿದ ಸರ್ವೆಯಲ್ಲಿ 1.92 ಲಕ್ಷ ಮಂದಿ ಅನ್ಯ ಕಾಯಿಲೆಗಳಿಂದ ನರಳುತ್ತಿರುವುದು ಕಂಡು ಬಂದಿದೆ. ಇದಲ್ಲದೆ, 7.43 ಲಕ್ಷ ವಯೋವೃದ್ಧರನ್ನು ಗುರುತಿಸಲಾಗಿದೆ. 37,017 ಮಂದಿ ಗರ್ಭಿಣಿಯರು, ಮಕ್ಕಳಿಗೆ ಹಾಲುಣಿಸುವ ತಾಯಂದಿರು ಪತ್ತೆಯಾಗಿದ್ದಾರೆ.

11,051 ಮಂದಿಗೆ ಸೋಂಕಿನ ಲಕ್ಷಣ: ಆರೋಗ್ಯ ಸಮೀಕ್ಷೆಯಲ್ಲಿ ಒಟ್ಟು 11,051 ಮಂದಿ ಕೆಮ್ಮು, ನೆಗಡಿ, ಶೀತ ಜ್ವರ ಮತ್ತುತೀವ್ರ ಉಸಿರಾಟದ ಸಮಸ್ಯೆಯಿಂದ ನರಳುತ್ತಿರುವುದು ಕಂಡು ಬಂದಿದೆ. ಇವರಲ್ಲಿ ಕೊರೋನ ಸೋಂಕಿನ ಲಕ್ಷಣಗಳಿರುವುದು ಪತ್ತೆಯಾಗಿದೆ. ಹೀಗಾಗಿ, ಇವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈಗಾಗಲೇ ಹಲವರ ಗಂಟಲುದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ.

ಕೋವಿಡ್ ಕೇಂದ್ರಗಳ ನಿರ್ವಹಣೆಗಾಗಿ 1700 ಸಿಬ್ಬಂದಿ ನೇಮಕಕ್ಕೆ 21.42 ಕೋಟಿರೂ. ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News