ಬೆಂಗಳೂರು ಬಿಟ್ಟ ಕಾರ್ಮಿಕರಿಗೆ ನರೇಗಾ ಆಸರೆ: ಮೂರು ತಿಂಗಳಲ್ಲಿ 6 ಲಕ್ಷ ಜಾಬ್‍ಕಾರ್ಡ್

Update: 2020-07-11 18:02 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.11: ಕೊರೋನ ಭೀತಿ ಹಿನ್ನೆಲೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ನಗರಗಳನ್ನು ತೊರೆದು ಸ್ವಗ್ರಾಮಗಳಲ್ಲಿ ಜೀವನ ಸಾಗಿಸಲು ಮುಂದಾದ ಕಾರ್ಮಿಕರಿಗೆ ನರೇಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಆಸರೆಯಾಗಿದೆ.

ಕೊರೋನ ಹಿನ್ನೆಲೆ ಲಾಕ್‍ಡೌನ್ ಮೊದಲು ಹಾಗೂ ನಂತರ ಜನರು ನಗರ ತೊರೆದು ಸ್ವಗ್ರಾಮಕ್ಕೆ ತೆರಳಿದ್ದು, ಜಾಬ್‍ಕಾರ್ಡ್ ಮಾಡಿಸಿಕೊಂಡು ನರೇಗಾದಡಿ ಕೆಲಸಕ್ಕೆ ಹೋಗುತ್ತಿದ್ದಾರೆ. ಈಗಾಗಲೇ 3 ತಿಂಗಳಲ್ಲಿ ಸುಮಾರು 6 ಲಕ್ಷ ಮಂದಿ ಹೊಸ ಉದ್ಯೋಗಖಾತ್ರಿ ಜಾಬ್‍ಕಾರ್ಡ್ ಪಡೆದಿದ್ದು, ಶೇ.45 ರಷ್ಟು ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕಾರ್ಮಿಕರೇ ಆಗಿದ್ದಾರೆ.

2020ರ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ 6.08 ಲಕ್ಷ ಜನರು ಜಾಬ್‍ಕಾರ್ಡ್ ಮಾಡಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕ 76,527 ಮಂದಿ ಜಾಬ್‍ಕಾರ್ಡ್ ಮಾಡಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 2.66 ಲಕ್ಷ ಜನರು ಜಾಬ್‍ಕಾರ್ಡ್ ಮಾಡಿಸಿಕೊಂಡಿದ್ದಾರೆ.

ಕಾರ್ಮಿಕರ ಕೊರತೆಯಿಂದ ಮಂದಗತಿಯಲ್ಲಿದ್ದ ನರೇಗಾ ಯೋಜನೆಗೆ ಕೊರೋನ ನೆರವಾಗಿದ್ದು, ಯುವಕರಿಗೂ ಸ್ವಗ್ರಾಮದಲ್ಲಿ ಉದ್ಯೋಗ ನೀಡಿದೆ. ವಿವಿಧ ಖಾಸಗಿ ಕೂಲಿ ಕೆಲಸ ಮಾಡುವವರಿಗೆ 400 ರಿಂದ 500 ರೂ. ಹಣ ಕೂಲಿಯಾಗಿ ದೊರೆಯುತ್ತದೆ. ಆದರೆ, ನರೇಗಾದ ಕೂಲಿ ಕಡಿಮೆ ಎಂಬ ನೆಪದಿಂದ ಬಹಳಷ್ಟು ಜನರು ಇದರತ್ತ ಮುಖವನ್ನೇ ಹಾಕಿರಲಿಲ್ಲ. ಆದರೆ, ದುಡಿಮೆಯ ನೆಪದಲ್ಲಿ ಹಳ್ಳಿ ಬಿಟ್ಟು ಬೆಂಗಳೂರು ಸೇರಿದ್ದ ಬಹುತೇಕರು ಕೊರೋನ ಹಿನ್ನೆಲೆ ತಮ್ಮ ಗ್ರಾಮಗಳಿಗೆ ಬಂದಿದ್ದಾರೆ. ನಂತರ ಇಲ್ಲಿ ಹೊಟ್ಟೆಪಾಡಿಗಾಗಿ ವೃತ್ತಿ ಮಾಡಲೇಬೇಕಾಗಿತ್ತು. ಆಗ ಅವರಿಗೆ ಆಸರೆಯಾಗಿ ಕಂಡದ್ದೇ ನರೇಗಾ ಯೋಜನೆಯಾಗಿದೆ.

ಪ್ರತಿಕಾರ್ಮಿಕನಿಗೆ ಕನಿಷ್ಠ 100 ದಿನಗಳ ಉದ್ಯೋಗ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ 5 ದಿನದೊಳಗೆ ಕೆಲಸ ಸಿಗುತ್ತದೆ. ದಿನಕ್ಕೆ 275 ರೂ. ವೇತನ ದೊರೆಯಲಿದ್ದು, ಕಾಮಗಾರಿ ಸ್ಥಳದಲ್ಲಿ ಒಂದಿಷ್ಟು ಕನಿಷ್ಠ ಮೂಲ ಸೌಕರ್ಯ ಕಾರ್ಮಿಕರಿಗೆ ಲಭ್ಯವಾಗಲಿದೆ. ಕೆಲಸ ಮಾಡಿದ ದಿನಗಳ ವೇತನ 15 ದಿನದೊಳಗೆ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ಹೊಲದಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಮುಂತಾದ ಕಾಮಗಾರಿಗಳು ನರೇಗಾ ಯೋಜನೆಯಡಿ ನಡೆಯುತ್ತಿವೆ.

ಯಾವ ವರ್ಷ ಎಷ್ಟು ಜಾಬ್‍ಕಾರ್ಡ್?:

2015-16ರಲ್ಲಿ 3,58,250 ಕುಟುಂಬಗಳಿಗೆ 11,21,898, 2016-17ರಲ್ಲಿ 4,32,830 ಕುಟುಂಬಗಳಿಗೆ 12,00,338, 2017-18ರಲ್ಲಿ 46,872 ಕುಟುಂಬಗಳಿಗೆ 10,84,206, 2018-19ರಲ್ಲಿ 5,09,349 ಕುಟುಂಬಗಳಿಗೆ 11,15,507, 2019-20ರಲ್ಲಿ 3,38,458 ಕುಟುಂಬಗಳಿಗೆ 7,56,295, 2020 ಏಪ್ರಿಲ್‍ನಿಂದ ಜೂನ್‍ವರೆಗೆ 2,43,642 ಕುಟುಂಬಗಳಿಗೆ 6,08,419 ಜಾಬ್‍ಕಾರ್ಡ್ ಮಾಡಿಕೊಡಲಾಗಿದೆ.

ಮೂರು ತಿಂಗಳಲ್ಲಿ ಎಷ್ಟು ಜನರಿಗೆ ಜಾಬ್‍ಕಾರ್ಡ್:

ಬಾಗಲಕೋಟೆ 16,497, ಬಳ್ಳಾರಿ 44,356, ಬೆಳಗಾವಿ 46,362, ಬೆಂಗಳೂರು ನಗರ 1212, ಬೆಂಗಳೂರು ಗ್ರಾಮಾಂತರ 7765, ಬೀದರ್ 53,142, ಚಾಮರಾಜನಗರ 47,511, ಚಿಕ್ಕಬಳ್ಳಾಪುರ 14,635, ಚಿತ್ರದುರ್ಗ 4,107, ದಕ್ಷಿಣಕನ್ನಡ 16,215, ದಾವಣಗೆರೆ 5,656, ಧಾರವಾಡ 4,941, ಗದಗ 15,378, ಹಾಸನ 5,209, ಹಾವೇರಿ 20,736, ಕಲಬುರಗಿ 76,527, ಕೊಡಗು 2,390, ಕೋಲಾರ 9,211, ಕೊಪ್ಪಳ 31,322, ಮಂಡ್ಯ 9,335, ಮೈಸೂರು 18,334, ರಾಯಚೂರು 31,525, ಶಿವಮೊಗ್ಗ 21,969, ರಾಮನಗರ 10,075, ತುಮಕೂರು 20,725, ಉಡುಪಿ 4,747, ಉತ್ತರಕನ್ನಡ 6,988, ವಿಜಯಪುರ 20,962, ಯಾದಗಿರಿಯಲ್ಲಿ 30,082 ಮಂದಿ ಜಾಬ್‍ಕಾರ್ಡ್ ಮಾಡಿಸಿಕೊಂಡಿದ್ದಾರೆ.

ಏಪ್ರಿಲ್‍ನಿಂದ ಜೂನ್‍ವರೆಗೆ 2,43,642 ಕುಟುಂಬಗಳಿಗೆ 6,08,419 ಜಾಬ್‍ಕಾರ್ಡ್ ಮಾಡಿಕೊಡಲಾಗಿದೆ. ಬಹುತೇಕ ಎಲ್ಲರಿಗೂ ಕೆಲಸ ನೀಡಲಾಗಿದೆ. ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಕಾರ್ಮಿಕರು ಕೃಷಿ ಕಡೆ ಮುಖ ಮಾಡಿದ್ದಾರೆ. ಗ್ರಾಮ ಪಂಚಾಯತ್ ಗಳಲ್ಲಿ ನರೇಗಾದಡಿ ಕಾಮಗಾರಿಗಳು ನಡೆಯುತ್ತಿವೆ.

-ಅನಿರುದ್ಧ ಶ್ರವಣ, ನರೇಗಾ ಆಯುಕ್ತ

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News