ರಾಜ್ಯದಲ್ಲಿ ಒಂದೇ ದಿನ 20,288 ಆರ್‍ಟಿಪಿಸಿಆರ್ ಪರೀಕ್ಷೆ: ಸಚಿವ ಡಾ.ಕೆ.ಸುಧಾಕರ್

Update: 2020-07-11 18:06 GMT

ಬೆಂಗಳೂರು, ಜು. 11: ವಾರಾಂತ್ಯದೊಳಗೆ 20 ಸಾವಿರ ಕೋವಿಡ್ ಪರೀಕ್ಷೆ ನಡೆಸುವ ಗುರಿ ಹೊಂದಿದ್ದ ರಾಜ್ಯದಲ್ಲಿ, ಶನಿವಾರದಂದು 20,288 ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿದ್ದು 2,798 ಪ್ರಕರಣಗಳು ಧೃಢಪಟ್ಟಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿನ ಪ್ರಮಾಣ ಇಂದಿಗೂ ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದು ಶೇ.1.69ರಷ್ಟಿದೆ. ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಕರ್ನಾಟಕ ಉತ್ತಮ ಯಶಸ್ಸು ಸಾಧಿಸಿದೆ ಎಂದರು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು 1 ಲಕ್ಷ ಆಂಟಿಜೆನ್ ಟೆಸ್ಟ್ ಮಾಡಲಾಗಿದ್ದು, ನಾಳೆಯೇ ಇದರ ಫಲಿತಾಂಶ ಸಿಗಲಿದೆ ಎಂದು ಹೇಳಿದರು.

3 `ಸಿ'ಗಳಿಂದ ದೂರವಿರಿ, 3 `ಡಬ್ಲ್ಯೂ'ಗಳನ್ನು ಪಾಲಿಸಿ: ಕೊರೋನ ಮಣಿಸಲು 3 ‘ಸಿ'ಗಳಾದ ಗಾಳಿಯಾಡದ ಪ್ರದೇಶ, ಹತ್ತಿರದ ಸಂಪರ್ಕ, ಗುಂಪು ಗೂಡುವುದು ಇವುಗಳಿಂದ ದೂರವಿದ್ದು, 3 `ಡಬ್ಲ್ಯೂ'ಗಳಾದ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಆಗಾಗ ಕೈತೊಳೆಯುತ್ತಿರುವುದು ಇವುಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಕೊರೋನ ಗೆಲ್ಲಬಹುದು ಎಂದು ಸಚಿವ ಸುಧಾಕರ್ ಅಭಿಪ್ರಾಯಪಟ್ಟರು.

ಕೊರೋನ ವಿರುದ್ಧದ ಹೋರಾಟದಲ್ಲಿ ಅಳಿಲು ಸೇವೆ: ಪ್ರತಿದಿನ ನೀತಿಯುಕ್ತ ಮಾಹಿತಿಗಳಿಂದ ಜನರಿಗೆ ಅರಿವು ಮೂಡಿಸಲು ಯತ್ನಿಸುತ್ತಿರುವ ಸುಧಾಕರ್ ಅವರು ರಾಮಾಯಣದಲ್ಲಿ ರಾಮ ಸೇತುವೆ ನಿರ್ಮಿಸಲು ಅಳಿಲು ಸೇವೆಯ ಮಹತ್ವವನ್ನು ವಿವರಿಸಿದರು. ಸೇವೆಯ ಮನಸ್ಥಿತಿ ಇರಬೇಕು, ಗಾತ್ರ ಮುಖ್ಯವಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಅದೇ ರೀತಿ ಕೊರೋನ ವಿರುದ್ಧದ ಸಮರದಲ್ಲಿ ನಮ್ಮ ಕೈಲಾಗುವ ನೆರವನ್ನು ಮಾಡಬೇಕು. ಚಿಕ್ಕ ಕೆಲಸ, ಅಲ್ಪ ಕಾಣಿಕೆ ಎಂಬ ಮನೋಭಾವ ಇರಬಾರದು. ಹಿಂಜರಿಕೆ ತೊರೆದು ನಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗಬೇಕು ಎಂದರು.

ಕೊರೋನ ನಿಯಂತ್ರಣಕ್ಕಾಗಿ ಸರಕಾರ ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ ಆದರಲ್ಲಿ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳು, ಆರೆಸೆಸ್ಸ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸ್ಕೌಟ್ಸ್ ಅಂಡ್ ಗೈಡ್ಸ್ ಮುಂತಾದ ಸಂಘಟನೆಗಳ ಸಹಕಾರ ಅಗತ್ಯವಿದೆ. ಕೋವಿಡ್ ಕೇರ್ ಸೆಂಟರ್ ಗಳಿಗೆ ಮತ್ತು ಆಸ್ಪತ್ರೆಗಳಿಗೆ ತಲುಪಿಸಲು ಸಹಾಯ ಮಾಡುವುದು, ಹಿರಿಯ ನಾಗರಿಕರು ಒಂಟಿಯಾಗಿದ್ದರೆ ಅವರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಎಂದರು.

ಹೋಮ್ ಐಸೋಲೇಷನ್ ಕುರಿತು ಮನೆಯ ಸದಸ್ಯರಿಗೆ ಮತ್ತು ನೆರೆಹೊರೆಯವರಿಗೆ ಅರಿವು ಮೂಡಿಸುವುದು, ಮುಂಜಾಗ್ರತೆಗಳ ಬಗ್ಗೆ ತಿಳಿಸುವುದು, ಅವರಲ್ಲಿರುವ ಭಯ, ಆತಂಕ ಮತ್ತು ಸೋಂಕಿತರ ಮೇಲಿರುವ ಕಳಂಕ ಭಾವ ನಿವಾರಿಸುವುದು ಹೀಗೆ ಹಲವಾರು ರೀತಿಯಲ್ಲಿ ಸಮಾಜದ ನೆರವು ಸಹಕಾರ ಅಗತ್ಯವಿದೆ. ಆದುದರಿಂದ ನಿಮ್ಮೆಲ್ಲರ ಸಹಕಾರ ಕೋರುತ್ತೇನೆ ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News