ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ: 166 ಮೂಲೆ ನಿವೇಶನ ಹರಾಜು

Update: 2020-07-11 18:22 GMT

ಬೆಂಗಳೂರು, ಜು.11: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಹರಾಜಿಗಿಟ್ಟ 195 ಮೂಲೆ ನಿವೇಶನಗಳ ಪೈಕಿ 166 ನಿವೇಶನಗಳು ಹರಾಜಾಗಿವೆ.

ಮೊದಲ ಹಂತದ ಸೈಟುಗಳ ಹರಾಜಿಗೆ ನೋಟಿಫಿಕೇಷನ್ ಹೊರಡಿಸಲಾಗಿತ್ತು. ಶುಕ್ರವಾರ ಬಿಡ್ ಮಾಡುವ ಅವಧಿ ಮುಗಿದಿದ್ದು, 2500ಕ್ಕೂ ಅಧಿಕ ಜನ ಬಿಡ್‍ನಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ 166 ನಿವೇಶನಗಳು ಹರಾಜಾಗಿವೆ. ಇದರಿಂದ ಪ್ರಾಧಿಕಾರಕ್ಕೆ 210.82 ಕೋಟಿ ರೂ. ಬರಲಿದೆ.

ಬಿಡ್ ಮಾಡಿದವರು ಮೂರು ದಿನಗಳಲ್ಲಿ ಶೇ. 25ರಷ್ಟು ಮುಂಗಡ ಕಟ್ಟಬೇಕು. ಉಳಿಕೆ ಹಣವನ್ನು ಬಿಡಿಎಯಿಂದ ಯಶಸ್ವಿ ಬಿಡ್ಡಿಂಗ್ ಪತ್ರ ತಲುಪಿದ 45 ದಿನಗಳ ಒಳಗಾಗಿ ಪಾವತಿ ಮಾಡಬೇಕು. ಮೂರು ದಿನದಲ್ಲಿ 52.70 ಕೋಟಿ ರೂ. ಬಿಡಿಎಗೆ ಸಂದಾಯವಾಗುವ ನಿರೀಕ್ಷೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಆಯುಕ್ತ ಡಾ. ಮಹಾದೇವ್, ಈ ಹಿಂದೆ ಪ್ರತಿ ತಿಂಗಳು 50 ಸೈಟುಗಳನ್ನು ಹರಾಜು ಮಾಡಲಾಗುತ್ತಿತ್ತು. ಆ ವೇಳೆ ಶೇ.40ರಷ್ಟು ಮಾತ್ರ ಗುರಿ ತಲುಪುತ್ತಿದ್ದೆವು. ಆದರೀಗ ಶೇ. 85ರಷ್ಟು ಗುರಿ ತಲುಪಿದ್ದೇವೆ. ಈ ಬಾರಿ ಸಾಮಾನ್ಯ, ಮಧ್ಯಮ ವರ್ಗದ ಜನರು ಹಾಗೂ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ ಮುಂದಿನ ವಾರ 300 ಸೈಟುಗಳ ಹರಾಜಿಗೆ ಸಿದ್ಧತೆ ನಡೆಸಲಾಗುತ್ತಿದೆ. ಇ ಹರಾಜಿಗೆ ಇದ್ದ ತಾಂತ್ರಿಕ ದೋಷವನ್ನು ಸರಿಪಡಿಸಿಕೊಳ್ಳಲಾಗಿದೆ. ಯಾವುದೇ ದೋಷ ಆಗದಂತೆ ಬಿಡ್ ನಡೆಸಲಾಗುವುದು.

ಇಂಜಿನಿಯರ್ ಗಳಿಗೆ ನೋಟಿಸ್: ಮೊದಲ ಹಂತದಲ್ಲಿ ಪ್ರಾಧಿಕಾರ 202 ನಿವೇಶನ ಹರಾಜಿಗೆ ಆನ್‍ಲೈನ್ ಮೂಲಕ ಬಿಡ್‍ಗೆ ಅವಕಾಶ ಕಲ್ಪಿಸಿತ್ತು. ಅದರಲ್ಲಿ 7 ನಿವೇಶನ ಬಫರ್ ಜೋನ್‍ನಲ್ಲಿರುವುದು ನೋಟಿಫಿಕೇಶನ್ ಬಳಿಕ ಗೊತ್ತಾಗಿದ್ದು, ಈ ಸೈಟುಗಳನ್ನು ಹಿಂಪಡೆಯಲಾಗಿತ್ತು. ಈ ಬಗ್ಗೆ ಇಂಜಿನಿಯರ್‍ಗಳಿಗೆ ಆಯುಕ್ತರು ನೋಟಿಸ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News