ಕರ್ಫ್ಯೂ ಉಲ್ಲಂಘಿಸಿದ ಸಚಿವರ ಪುತ್ರನನ್ನು ತಡೆದ ಮಹಿಳಾ ಪೊಲೀಸ್ ಸಿಬ್ಬಂದಿ ರಾಜೀನಾಮೆ

Update: 2020-07-12 13:03 GMT

ಅಹ್ಮದಾಬಾದ್, ಜು.12: ಗುಜರಾತ್ ಸಚಿವರೊಬ್ಬರ ಪುತ್ರನನ್ನು ರಾತ್ರಿ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಮತ್ತು ಮಾಸ್ಕ್ ಧರಿಸದೇ ಇದ್ದುದಕ್ಕಾಗಿ ತಡೆದ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಒತ್ತಾಯಪೂರ್ವಕವಾಗಿ ಸೇವೆಗೆ ರಾಜೀನಾಮೆ ಕೊಡಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಗುಜರಾತ್‌ನ ಸೂರತ್‌ ನಲ್ಲಿ ಬುಧವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಚಿವ ಪುತ್ರನನ್ನು ಪ್ರಶ್ನಿಸಿದಾಗ ಆತ ಮಹಿಳಾ ಪೊಲೀಸ್ ಸಿಬ್ಬಂದಿ ಸುನೀತಾ ಯಾದವ್ ಅವರಿಗೆ ಬೆದರಿಕೆ ಹಾಕಿದ್ದ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಆತನ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಮಹಿಳಾ ಪೊಲೀಸ್ ರಾಜೀನಾಮೆಗೆ ಒತ್ತಡ ತಂದಿದ್ದರಿಂದ ಬೇಸತ್ತು ಅವರು ಸೇವೆಗೆ ಗುಡ್‌ಬೈ ಹೇಳಿದ್ದಾರೆ.

ಗುಜರಾತ್ ಆರೋಗ್ಯ ಸಚಿವ ಕುಮಾರ್ ಕನಾನಿಯವರ ಪುತ್ರ ಪ್ರಕಾಶ್ ಹಾಗೂ ಮಹಿಳಾ ಪೊಲೀಸ್ ಸುನೀತಾ ಯಾದವ್ ನಡುವಿನ ವಾಗ್ವಾದ ಕುರಿತ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ತನ್ನ ಅಧಿಕಾರದ ಬಗ್ಗೆಯೂ ಪ್ರಕಾಶ್ ಧಮಕಿ ಹಾಕುತ್ತಿರುವುದು ಕೇಳಿಸುತ್ತಿದೆ. ಈ ಸಂದರ್ಭದಲ್ಲಿ ಸುನೀತಾ ತಮ್ಮ ಮೇಲಧಿಕಾರಿಯನ್ನು ಕರೆದಿದ್ದಾರೆ. ಮೇಲಧಿಕಾರಿ ಪ್ರಕರಣ ಮುಚ್ಚಿ ಹಾಕುವ ಸಲುವಾಗಿ ಸುನೀತಾ ಅವರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಇದರಿಂದ ಬೇಸತ್ತ ಸುನೀತಾ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಎಸಿಪಿ ಪಿ.ಎಲ್.ಚೌಧರಿ ವಿವರಿಸಿದ್ದಾರೆ.

ಈ ಆಡಿಯೊ ಸೂರತ್ ಪೊಲೀಸ್ ಆಯುಕ್ತರ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಎಸಿಪಿ ಸಿ.ಕೆ.ಪಟೇಲ್ ಅವರಿಗೆ ಸೂಚಿಸಿದ್ದಾರೆ. ತನಿಖಾ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದೇ ಜಾಗದಲ್ಲಿ 365 ದಿನವೂ ನಿಲ್ಲುವಂತೆ ಮಾಡುವ ಅಧಿಕಾರ ನನಗಿದೆ ಎಂದು ಸುನೀತಾ ಅವರಿಗೆ ಧಮಕಿ ಹಾಕುತ್ತಿರುವುದು ಆಡಿಯೊದಲ್ಲಿ ಕೇಳಿಸುತ್ತಿದೆ. ಇದಕ್ಕೆ ಪ್ರತಿಯಾಗಿ ನಾನು 365 ದಿನ ಇಲ್ಲಿ ನಿಲ್ಲಲು ನಿಮ್ಮ ತಂದೆಯ ಆಳಲ್ಲ ಎಂದು ಸುನೀತಾ ಅಬ್ಬರಿಸಿದ್ದಾರೆ. ಕರ್ಫ್ಯೂ ಉಲ್ಲಂಘಿಸಿ ರಾತ್ರಿ 10ರ ವೇಳೆಗೆ ಅಡ್ಡಾಡುತ್ತಿದ್ದ ಇವರ ಬಗ್ಗೆ ದೂರು ನೀಡಲು ಮೇಲಧಿಕಾರಿಯನ್ನು ಕರೆಯುತ್ತಿರುವುದು ಕೂಡಾ ಆಡಿಯೊದಲ್ಲಿ ಕೇಳಿಸುತ್ತಿದೆ. ಅವರು ಸಚಿವ ಪುತ್ರನನ್ನು ಕರೆದಿದ್ದಾರೆ. ಎಲ್ಲರೂ ಸೇರಿ ಸುನೀತಾ ಅವರನ್ನು ಬೈದಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News