ಕೊರೋನ ಅಟ್ಟಹಾಸ: ಬೆಂಗಳೂರಿನಲ್ಲಿ ಮತ್ತೆ 45 ಮಂದಿ ಸಾವು, 1,525 ಪ್ರಕರಣಗಳು ದೃಢ

Update: 2020-07-12 16:55 GMT

ಬೆಂಗಳೂರು, ಜು.12: ನಗರದಲ್ಲಿ ರವಿವಾರ ಒಂದೇ ದಿನ 1,525 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 45 ಜನರು ಮೃತರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 18,387ಕ್ಕೆ ಏರಿಕೆಯಾಗಿದ್ದು, 314 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 14,067 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 274 ಜನರು ಸೋಂಕಿಗೆ ಬಲಿಯಾಗಿದ್ದು, ರವಿವಾರ 206 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 22,917 ವ್ಯಕ್ತಿಗಳಿಗೆ ಕೊರೋನ ತಪಾಸಣೆ ಮಾಡಲಾಗಿದೆ.

ಬೆಡ್ ಸಿಗದೇ ಮಹಿಳೆ ಮೃತ

ಬೆಡ್ ಸಿಗದ ಹಿನ್ನೆಲೆ ಕೊರೋನ ಶಂಕಿತ ಮಹಿಳೆ(60) ಸಾವನ್ನಪ್ಪಿರುವ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾಗಿದೆ. ಉಸಿರಾಟದ ತೊಂದರೆ ಇದ್ದ ಹಿನ್ನೆಲೆ ಮಹಿಳೆ ವಿಕ್ಟೋರಿಯಾಗೆ ಬಂದಿದ್ದರು. ಆದರೆ, ಆಸ್ಪತ್ರೆಗೆ ಸೇರಿಸಿಕೊಳ್ಳದ ಕಾರಣ ಗೇಟ್ ಮುಂದೆಯೇ ನರಳಿ ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊರೋನ ವಾರಿಯರ್ಸ್ ಗೆ ಸೋಂಕು

ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊರೋನ ವಾರಿಯರ್ಸ್ ಗೆ ಸೋಂಕು ತಗಲಿದೆ. ಇಬ್ಬರು ವೈದ್ಯರು, ಇಬ್ಬರು ನರ್ಸ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಐವರಿಗೆ ಸೋಂಕು ತಗಲಿದೆ.

ಕ್ವಾರಂಟೈನ್ ಇರಬೇಕಾದ ವ್ಯಕ್ತಿ ರಸ್ತೆಯಲ್ಲಿ

ಕ್ವಾರಂಟೈನ್ ಸೀಲ್ ಹೊಂದಿರುವ ವ್ಯಕ್ತಿ ಆಟೋದಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಮಲ್ಲೇಶ್ವರದಲ್ಲಿ ಪೊಲೀಸರ ತಪಾಸಣೆ ವೇಳೆ ಆತನ ಕೈ ಮೇಲಿದ್ದ ಸೀಲ್‍ನಿಂದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.

ಕೈಗೆ ಸೀಲ್ ಹಾಕಿದರೂ ಆಟೋದಲ್ಲಿ ಓಡಾಡಿದ್ದಾನೆ. ಕ್ವಾರಂಟೈನ್ ವ್ಯಕ್ತಿ ಯಶವಂತಪುರದಿಂದ ಮಲ್ಲೇಶ್ವರಂ ಮೂಲಕ ಹೆಬ್ಬಗೊಡಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಇವತ್ತೇ ಸೀಲ್ ಹಾಕಿರುವುದಾಗಿ ಆ ವ್ಯಕ್ತಿ ಹೇಳಿ ಮನೆಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.

ರಸ್ತೆಯಲ್ಲೇ ಮೃತಪಟ್ಟ ವೃದ್ಧ

ಅರಕೆರೆಯ 78 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ವೃದ್ಧನನ್ನು ದಾಖಲಿಸಿಕೊಳ್ಳದೇ ವೈದ್ಯರು ಕೇವಲ ಸ್ವಾಬ್ ಟೆಸ್ಟ್ ಪಡೆದು ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ. ಆದರೆ, ವೃದ್ಧ ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವಾಗ ದಾರಿಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತಪಟ್ಟ ನಂತರ ಅವರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.

ಮಗನ ಮುಂದೆಯೇ ಪ್ರಾಣಬಿಟ್ಟ ತಾಯಿ

ಇಂದು ನಗರದ 42 ವರ್ಷದ ಮಹಿಳೆಯೊಬ್ಬರಿಗೆ ದಿಢೀರ್ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಅವರ ಮಗ ಮಹಿಳೆಯನ್ನು ನಗರದ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಅಲ್ಲಿ ಐಸಿಯು ವಾರ್ಡ್ ಖಾಲಿ ಇಲ್ಲದ ಕಾರಣ ಹಾಗೂ ಮಹಿಳೆಗೆ ಆಕ್ಸಿಜನ್ ಅವಶ್ಯಕತೆ ಇರುವ ಹಿನ್ನೆಲೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಮಹಿಳೆಯನ್ನು ಅಂಬುಲೆನ್ಸ್ ನಲ್ಲೇ ನಗರದ ಹಲವು ಆಸ್ಪತ್ರೆಗೆ ಸುತ್ತಾಡಿದ್ದಾರೆ. ಆದರೆ ಎಲ್ಲಿಯೂ ಬೆಡ್ ಸಿಗದ ಹಿನ್ನೆಲೆ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News