ಹೊಸಕೋಟೆ: ಅಲ್ ಅಮೀನ್ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

Update: 2020-07-12 17:34 GMT

ಬೆಂಗಳೂರು, ಜು.12: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿರುವ ಅಲ್ ಅಮೀನ್ ವಸತಿ ಶಾಲೆಯಲ್ಲಿ ಹೊಸಕೋಟೆ ಮುಸ್ಲಿಮ್ ಜಮಾಅತ್ ವತಿಯಿಂದ 100 ಹಾಸಿಗೆಗಳ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸಲಾಗಿದೆ.

ಕೊರೋನ ಮಹಾಮಾರಿ ವಿರುದ್ಧ ಹೋರಾಡುವುದು ಕೇವಲ ಸರಕಾರದ ಕೆಲಸವಲ್ಲ, ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನು ಈ ಹೋರಾಟಕ್ಕೆ ಕೈ ಜೋಡಿಸಬೇಕು. ಈ ಹಿನ್ನೆಲೆಯಲ್ಲಿ ಹೊಸಕೋಟೆಯ ಎಲ್ಲ ಮುಸ್ಲಿಮರು ಒಗ್ಗಟ್ಟಾಗಿ ಇವತ್ತು ಕೋವಿಡ್ ಕೇರ್ ಸೆಂಟರ್ ಆರಂಭಗೊಳ್ಳಲು ಕಾರಣಕರ್ತರಾಗಿದ್ದಾರೆ ಎಂದು ಈ ಕೇಂದ್ರದ ವೈದ್ಯಕೀಯ ತಂಡದ ಮುಖ್ಯಸ್ಥ ಡಾ.ನೂರ್ ಖಾನ್ ಹೇಳಿದರು.

ಹೊಸಕೋಟೆಯಲ್ಲಿ ಕ್ವಾರಂಟೈನ್ ಸೆಂಟರ್ ಮಾತ್ರ ಇತ್ತು. ಆದರೆ, ಕೋವಿಡ್ ಪಾಸಿಟಿವ್ ಆಗುವಂತಹ ರೋಗಿಗಳಿಗೆ ಆರೈಕೆ ಮಾಡಲು ಇಲ್ಲಿ ಯಾವುದೆ ಕೋವಿಡ್ ಕೇರ್ ಸೆಂಟರ್ ಇರಲಿಲ್ಲ. ಇದರಿಂದಾಗಿ, ಈ ತಾಲೂಕಿನ ಕೋವಿಡ್ ಪಾಸಿಟಿವ್ ರೋಗಿಗಳನ್ನು ಹಜ್‍ ಭವನ, ವಿಕ್ಟೋರಿಯಾ, ರಾಜೀವ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು ಎಂದು ಅವರು ಹೇಳಿದರು.

ರೋಗಿಗಳಿಗೆ ಇಲ್ಲಿ ಉಚಿತ ಔಷಧ, ಊಟ, ಸ್ವಚ್ಛತೆ, ಬಿಸಿ ನೀರು, ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗಿದೆ. ನಮ್ಮ ವೈದ್ಯಕೀಯ ತಂಡವನ್ನು ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಪಿಪಿಇ ಕಿಟ್‍ಗಳನ್ನು ತರಿಸಲಾಗಿದೆ. ಎಂವಿಜಿ ಆಸ್ಪತ್ರೆಯಲ್ಲಿ 100 ಹಾಸಿಗೆ ಹಾಗೂ ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಈ ತಾಲೂಕಿಗಾಗಿ ಕಾಯ್ದಿರಿಸಲಾಗಿದೆ. ಇಲ್ಲಿ ದಾಖಲಾಗುವ ರೋಗಿಗಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದಲ್ಲಿ ಅಲ್ಲಿಗೆ ಕಳುಹಿಸಿಕೊಡುತ್ತೇವೆ ಎಂದು ನೂರ್ ಖಾನ್ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಮೂಲಕ ನಮಗೆ ಕಳುಹಿಸಿಕೊಡುವ ರೋಗಿಗಳಿಗೆ ನಾವು ಈ ಕೇಂದ್ರದಲ್ಲಿ ಆರೈಕೆ ಮಾಡುತ್ತೇವೆ. ನಮ್ಮದು ಒಂದು ಆಂಬ್ಯುಲೆನ್ಸ್, ತಾಲೂಕು ಕಚೇರಿಯಲ್ಲಿ ಎರಡು ಆಂಬ್ಯುಲೆನ್ಸ್ ಗಳು ಸೇವೆಗೆ ಲಭ್ಯವಿದೆ. ಇದನ್ನು ಒಂದು ಮಾದರಿ ಕೇಂದ್ರವನ್ನಾಗಿ ಮಾಡಿ, ಇತರೆಡೆಯೂ ಇಂತಹ ಕೇಂದ್ರಗಳನ್ನು ತೆರೆಯಲು ಪ್ರಯತ್ನಿಸುವುದಾಗಿ ನೂರ್ ಖಾನ್ ಹೇಳಿದರು.

ಸಮಾಜ ಸೇವಕ ಶೌರತ್ ಖಾನ್ ಮಾತನಾಡಿ, ಈ ಕೋವಿಡ್ ಕೇರ್ ಸೆಂಟರ್ ಮುಸ್ಲಿಮ್ ಬಾಂಧವರ ಮೂಲಕ ಹೊಸಕೋಟೆ ತಾಲೂಕಿಗೆ ಒಂದು ಕೊಡುಗೆ ಯಾಗಿದೆ. ಯಾವುದೆ, ಜಾತಿ, ಧರ್ಮದ ಬೇಧವಿಲ್ಲದೆ ಪ್ರತಿಯೊಬ್ಬ ರೋಗಿಗೂ ಇಲ್ಲಿ ಉಚಿತ ಆರೈಕೆ ಮಾಡಲು ನಿರ್ಧರಿಸಲಾಗಿದೆ ಎಂದರು.

ನಮ್ಮ ಕಾರ್ಯಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ, ಅಲ್ ಅಮೀನ್ ಎಜುಕೇಷನ್ ಟ್ರಸ್ಟ್‍ನವರು ಸೇರಿದಂತೆ ಎಲ್ಲರ ಸಹಕಾರವಿದೆ. ಒಂದು ಸವಾಲಾಗಿ ಈ ಕೋವಿಡ್ ಕೇರ್ ಸೆಂಟರ್ ಅನ್ನು ನಾವು ಪ್ರಾರಂಭಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಡಾ.ಸೈಯ್ಯದ್ ಮುಝಮ್ಮಿಲ್ ಅಹ್ಮದ್, ಸಮಾಜ ಸೇವಕ ಗಫಾರ್ ಬೇಗ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News