ಕೋವಿಡ್ ರೋಗಿಗಳಿಗಾಗಿ ವಾರ್ಡ್ ಗೆ ಒಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆ: ಸಚಿವ ಸುರೇಶ್‍ ಕುಮಾರ್

Update: 2020-07-12 17:50 GMT

ಬೆಂಗಳೂರು, ಜು.12: ಬೊಮ್ಮನಹಳ್ಳಿ ವಲಯಕ್ಕೆ ಕೋವಿಡ್-19 ಸೋಂಕಿತ ರೋಗಿಗಳಿಗಾಗಿ ವಾರ್ಡ್ ಗೆ ತಲಾ ಒಂದರಂತೆ ಆಂಬುಲೆನ್ಸ್ ವಾಹನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಬೊಮ್ಮನಹಳ್ಳಿ ವಲಯ ಕೊರೋನ ಉಸ್ತುವಾರಿಗೆ ನಿಯುಕ್ತಿಯಾಗಿರುವ ಅವರು, ಭಾನುವಾರ ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು.

ಪ್ರಸ್ತುತ ಕೋವಿಡ್ ಪರೀಕ್ಷೆ ಫಲಿತಾಂಶ ಬರಲು ಸರಾಸರಿ ನಾಲ್ಕರಿಂದ ಐದು ದಿನಗಳಾಗುತ್ತಿದೆ. ಇನ್ನು ಮುಂದೆ ಒಂದು ದಿನದಲ್ಲಿ ಫಲಿತಾಂಶ ಬರುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಖಾಸಗಿ ಆಸ್ಪತ್ರೆಗಳು ಸರಕಾರದ ಸೂಚನೆಯಂತೆ ನಿಗದಿತ ಸಂಖ್ಯೆಯ ಬೆಡ್‍ಗಳನ್ನು ನೀಡದಿರುವುದರ ಕುರಿತಂತೆ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಅಪೋಲೋ, ಪೋರ್ಟೀಸ್, ಪ್ರಶಾಂತ್, ನಾರಾಯಣ ಹೃದಯಾಲಯ ಮುಂತಾದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿ, ಕೂಡಲೇ ಬೆಡ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಂಸತ್ ಸದಸ್ಯ ತೇಜಸ್ವಿ ಸೂರ್ಯ, ಶಾಸಕರಾದ ಎಂ. ಕೃಷ್ಣಪ್ಪ, ಸತೀಶ್‍ ರೆಡ್ಡಿ, ಐಎಎಸ್‍ ಅಧಿಕಾರಿ ಕ್ಯಾ.ಮಣಿವಣ್ಣನ್ ಬಿ.ಬಿ.ಎಂ.ಪಿ. ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News