ಕೋವಿಡ್ ನಿಯಂತ್ರಣಕ್ಕೆ ಲಾಕ್‍ಡೌನ್ ಒಂದೇ ಪರಿಹಾರವಲ್ಲ: ಸಿಎಂ ಯಡಿಯೂರಪ್ಪ

Update: 2020-07-13 15:10 GMT

ಬೆಂಗಳೂರು, ಜು. 13: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಾರಕ ಕೊರೋನ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್‍ಡೌನ್ ಘೋಷಣೆ ಬೆನ್ನಲ್ಲೆ, ದಕ್ಷಿಣ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿಯೂ ಒಂದು ವಾರ ಕಾಲ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೀದರ್ ಜಿಲ್ಲೆ ಸಾವಿನ ಪ್ರಮಾಣ ದೇಶದ 5 ಜಿಲ್ಲೆಗಳಲ್ಲಿ ಒಂದಾಗಿದ್ದು, ಮರಣ ಪ್ರಮಾಣ ನಿಯಂತ್ರಿಸಬೇಕು. ಈವರೆಗೆ ಸಂಭವಿಸಿದ ಮರಣಗಳ ಕುರಿತು ತಜ್ಞರ ವಿಶ್ಲೇಷಣಾ ವರದಿಯನ್ನು ಕೂಡಲೇ ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಬಗ್ಗೆ ಆಯಾ ಜಿಲ್ಲಾಡಳಿತಗಳು, ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಬಹುದು ಎಂದು ಯಡಿಯೂರಪ್ಪ ಸೂಚನೆ ನೀಡಿದ್ದು, `ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಒಂದೇ ಪರಿಹಾರವಲ್ಲ, ಸೋಂಕು ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಅಗತ್ಯ ಜಾಗೃತಿ ಮೂಡಿಸಬೇಕು. ನೀವೆಲ್ಲರೂ ಏನು ಮಾಡುತ್ತಿರೋ ನನಗೆ ಗೊತ್ತಿಲ್ಲ. ಒಂದು ತಿಂಗಳಲ್ಲಿ ಸೋಂಕು ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುವಂತೆ ಕ್ರಮ ವಹಿಸಬೇಕು' ಎಂದು ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಿದರು.

ಈ ಮಧ್ಯೆ ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿಯೂ ಒಂದು ವಾರ ಲಾಕ್‍ಡೌನ್ ಘೋಷಣೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಅಲ್ಲದೆ, ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಉಡುಪಿ, ಬಳ್ಳಾರಿ, ಬೀದರ್ ಹಾಗೂ ಗದಗ ಜಿಲ್ಲೆಗಳಲ್ಲಿಯೂ ಲಾಕ್‍ಡೌನ್ ಮಾಡಬೇಕೆಂದು ಆಗ್ರಹಿಸಲಾಗುತ್ತಿದೆ. ಆದರೆ, ಸಂಪೂರ್ಣ ಲಾಕ್‍ಡೌನ್‍ಗೆ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹಾಗೂ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಧಾರವಾಡ ಜಿಲ್ಲೆ ಲಾಕ್‍ಡೌನ್: `ಕೊರೋನ ಸೋಂಕಿನ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ, ಧಾರವಾಡ ಜಿಲ್ಲೆಯಲ್ಲಿ ಜು.15ರ ಬುಧವಾರ ಬೆಳಗ್ಗೆ 10ರಿಂದ ಜು.24ರ ರಾತ್ರಿ 8ಗಂಟೆಯ ವರೆಗೆ ಒಂದು ವಾರ ಕಾಲ ಜಿಲ್ಲೆ ಸಂಪೂರ್ಣ ಲಾಕ್‍ಡೌನ್ ಜಾರಿ ಮಾಡಲಾಗುವುದು'

-ಜಗದೀಶ್ ಶೆಟ್ಟರ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News