ಬೆಂಗಳೂರು ನಗರದಲ್ಲಿಂದು 1,315 ಕೊರೋನ ಪ್ರಕರಣ ದೃಢ: 47 ಮಂದಿ ಸಾವು

Update: 2020-07-13 17:16 GMT

ಬೆಂಗಳೂರು, ಜು.13: ನಗರದಲ್ಲಿ ಸೋಮವಾರ ಒಂದೇ ದಿನಕ್ಕೆ 1,315 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 47 ಜನರು ಮೃತರಾಗಿದ್ದಾರೆ.

ನಗರದಲ್ಲಿ ಸೋಂಕಿತರ ಸಂಖ್ಯೆ 19,702 ಏರಿಕೆಯಾಗಿದೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 14,067 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 317 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ ನಗರದಲ್ಲಿ 321 ಜನರು ಸೋಂಕಿಗೆ ಬಲಿಯಾಗಿದ್ದು, 4,328 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಮವಾರ 283 ಜನರು ಗುಣಮುಖರಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 23,134 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್(ಬಿಎಂಟಿಎಫ್) ಹೋಮ್‍ಗಾರ್ಡ್ ಗೆ ಸೋಂಕು ತಗುಲಿದ್ದು, ಈ ಹಿನ್ನೆಲೆ ಬಿಎಂಟಿಎಫ್ ಕಚೇರಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಚಿತ್ರನಟ ಪ್ರೇಮ್ ಅವರ 65 ವರ್ಷದ ತಾಯಿಗೆ ಕೊರೋನ ಸೋಂಕು ತಗಲಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಕಾಮಾಕ್ಷಿಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಡಿವಾಳದಲ್ಲಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯದ ಲ್ಯಾಬ್‍ನಲ್ಲಿ ಕೆಲಸ ನಿರ್ವಹಿಸುವ ಇಬ್ಬರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಇತ್ತೀಚಿಗೆ ಇಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಎಫ್‍ಎಸ್‍ಎಲ್ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿತ್ತು. ಕಚೇರಿಗೆ ಸ್ಯಾನಿಟೈಸ್ ಸಿಂಪಡಣೆ ಮಾಡಲಾಗಿದೆ.

ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿ

ಒಂದೆಡೆ ಸೋಂಕಿನಿಂದ ಮೃತಪಡುತ್ತಿದ್ದು, ಮತ್ತೊಂದೆಡೆ ರಸ್ತೆಯಲ್ಲಿ ಕುಸಿದು ಬಿದ್ದು ಒಡ್ಡಾಡುತ್ತಿದ್ದಾರೆ. ಕಳೆದ ವಾರದಲ್ಲಿ ಮೂವರು ಕುಸಿದು ಬಿದ್ದು ಮೃತಪಟ್ಟಿದ್ದರು. ಸೋಮವಾರ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ಶಂಕರಮಠ ಕಿರ್ಲೋಸ್ಕರ್ ಕಾಲನಿಯಲ್ಲಿನ ರಸ್ತೆಯಲ್ಲಿ 50 ವರ್ಷದ ವ್ಯಕ್ತಿಯು ಕುಸಿದು ಬಿದ್ದಿದ್ದು, ಕೊರೋನ ಹಿನ್ನೆಲೆ ಯಾರೂ ಸಹಾಯಕ್ಕೆ ಹೋಗಿಲ್ಲ. ಈ ವಿಷಯವನ್ನು ಸ್ಥಳೀಯರು ವಾರ್ಡ್ ಸದಸ್ಯರಿಗೆ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಬಂದ ಸದಸ್ಯರು ಆಂಬುಲನ್ಸ್ ಗೆ ಕರೆ ಮಾಡಿದ್ದಾರೆ. ಗಂಟೆಯಾದರೂ, ಆಂಬುಲೆನ್ಸ್ ಬಾರದ ಹಿನ್ನೆಲೆ ಆಟೋದಲ್ಲಿಯೇ ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಿಪಿಇ ಕಿಟ್ ಧರಿಸಿ ಶವ ಸಾಗಿಸಿದ ಪಾಲಿಕೆ ಸದಸ್ಯ

ಮಲ್ಲಸಂದ್ರ ಪಾರ್ಕ್ ಬಳಿ ಅನಾಥ ಶವವೊಂದು ಸೋಮವಾರ ಬೆಳಗ್ಗೆ ಪತ್ತೆಯಾಗಿದ್ದು, ಸ್ಥಳೀಯರು ಪಾಲಿಕೆ ಸದಸ್ಯ ಲೋಕೇಶ್ ಅವರಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸದಸ್ಯ ಆಂಬುಲನ್ಸ್ ಗೆ ಕರೆ ಮಾಡಿದ್ದಾರೆ. ನೆರೆದಿದ್ದ ಸ್ಥಳೀಯರು ಶವವನ್ನು ಸಾಗಿಸಲು ಹಿಂದೇಟು ಹಾಕಿದ್ದು, ತಾವೇ ಪಿಪಿಇ ಕಿಟ್ ಧರಿಸಿ ಶವ ಸಾಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News