ಬೆಂಗಳೂರು ಪೂರ್ವ ವಲಯದ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಮಾಂಡ್ ಕೋವಿಡ್ ಸೆಂಟರ್: ವಿ.ಸೋಮಣ್ಣ

Update: 2020-07-13 17:32 GMT

ಬೆಂಗಳೂರು, ಜು.13: ಬೆಂಗಳೂರು ನಗರ ಪೂರ್ವ ವಲಯದ ಪ್ರತಿ ವಿಧಾನಸಭಾ ಕ್ಷೇತ್ರ ಗಳಲ್ಲಿ ಕಮಾಂಡ್ ಕೋವಿಡ್ ಸೆಂಟರ್ ಗಳನ್ನು ನಿರ್ಮಾಣ ಮಾಡಿ ಅದರಲ್ಲಿ ಆರೋಗ್ಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಕಾರ್ಯಪಾಲಕ ಅಭಿಯಂತರರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಸತಿ‌ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.

ಇಂದು ಸಂಜೆ ನಗರದ ಮಯೋಹಾಲ್ ನ ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೂರ್ವ ವಲಯದ 6 ವಿಧಾನ ಸಭಾ ಕ್ಷೇತ್ರ ಗಳಲ್ಲಿ ಒಟ್ಟು 18 ಆಂಬುಲೆನ್ಸ್ ಹಾಗೂ 60 ಟಿಟಿ ವಾಹನಗಳು ಒಳಗೊಂಡು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 3 ಆಂಬುಲೆನ್ಸ್ ಹಾಗೂ 10 ಟಿಟಿ ವಾಹನ ಅಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಶವವನ್ನು ಪೋಷಕರಿಗೆ ನೀಡಲಾಗುತ್ತದೆ. ಒಂದು ವೇಳೆ ಪೋಷಕರು ಶವವನ್ನು ನಿರಾಕರಿದರೆ ಬಿಬಿಎಂಪಿ ಗೆ ಹಸ್ತಾಂತರ ಮಾಡಲಾಗುತ್ತದೆ‌. 44 ವಾರ್ಡ್ ಗಳಲ್ಲಿ ಕಳೆದ ವಾರ 6 ಕಡೆ ಫೀವರ್ ಕ್ಲಿನಿಕ್ ನಿರ್ಮಿಸಿದ್ದು, ಇವತ್ತು 26 ಕಡೆ ಫೀವರ್ ಕ್ಲಿನಿಕ್ ನಿರ್ಮಾಣ ‌ಮಾಡಲಾಗುವುದು. ಇನ್ನು, 18 ವಾರ್ಡ್ ಗಳಲ್ಲಿ ಜಾಗದ ಕೊರತೆ ಇದೆ. ಆದರಿಂದ ತಕ್ಷಣವೇ ಸುಸಜ್ಜಿತವಾದ 5 ಮೊಬೈಲ್ ವಾಹನಗಳನ್ನು ಬಾಡಿಗೆ ತೆಗೆದುಕೊಂಡು 18 ವಾರ್ಡ್ ಗಳಲ್ಲಿ  ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.

ಕಮಾಂಡ್ ಕೋವಿಡ್ ಸೆಂಟರ್ ಗಳಲ್ಲಿ 24x7 ಸಹಾಯ ವಾಣಿ ಕೇಂದ್ರವನ್ನು ರಚಿಸಲಾಗುತ್ತದೆ. ಡಾಕ್ಟರ್ ಹಾಗೂ ಲ್ಯಾಬ್ ಟೆಕ್ನೀಶಿಯನ್ ಕೊರತೆ ಇರುವುದರಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಒಟ್ಟು 6 ಕ್ಷೇತ್ರದಲ್ಲಿ 1438 ಬೂತ್ ಗಳಿದ್ದು, ಬೂತ್ ಗಳಲ್ಲಿ ವಾರಿಯರ್ಸ್‌ ತಂಡಗಳನ್ನು ರಚಿಸಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿತರಿಗೆ ಹೆಚ್ಚಿನ ದರ ವಿಧಿಸಿದರೆ ಸೂಕ್ತ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News