ಕೋವಿಡ್ ಕೇರ್ ಸೆಂಟರ್ ಗಳಿಗೆ ಹಾಸಿಗೆ ಬಾಡಿಗೆ: ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ?

Update: 2020-07-13 18:24 GMT

ಬೆಂಗಳೂರು, ಜು. 13: ವೈದ್ಯಕೀಯ ಉಪಕರಣ ಅವ್ಯವಹಾರ ಆರೋಪದದ ಬೆನ್ನಲ್ಲೆ ಮಾರಕ ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಕೋವಿಡ್-19 ಕೇರ್ ಸೆಂಟರ್‍ಗಳಿಗೆ ಹಾಸಿಗೆ, ವೈದ್ಯಕೀಯ ಉಪಕರಣಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಖರೀದಿ ಬದಲು ಬಾಡಿಗೆ ಪಡೆದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೋವಿಡ್-19 ಕೇರ್ ಸೆಂಟರ್‍ಗಳಿಗೆ ಹಾಸಿಗೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಬಾಡಿಗೆಗೆ ಪಡೆಯುವ ವಿಚಾರ ತನ್ನ ಗಮನಕ್ಕೆ ಏಕೆ ತಂದಿಲ್ಲ ಎಂದು ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಸಚಿವರನ್ನು ಸಿಎಂ ಪ್ರಶ್ನಿಸಿದ್ದಾರೆಂದು ಗೊತ್ತಾಗಿದೆ.

ಈಗಾಗಲೇ ವೈದ್ಯಕೀಯ ಉಪಕರಣ ಖರೀದಿಗೆ ಸಂಬಂಧಪಟ್ಟಂತೆ ವಿಪಕ್ಷಗಳು ಸರಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ವೇಳೆ ತಮ್ಮ ಗಮನಕ್ಕೆ ತರುವುದು ಬೇಡವೇ ಎಂದು ಪ್ರಶ್ನಿಸಿದ್ದು, ಹಾಸಿಗೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಖರೀದಿಸುವ ಬದಲು ಬಾಡಿಗೆಗೆ ಪಡೆದದ್ದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆಂದು ತಿಳಿದು ಬಂದಿದೆ.

ವಿಳಂಬ ಏಕೆ: ಸೋಂಕಿತರನ್ನು ತ್ವರಿತಗತಿಯಲ್ಲಿ ಆಸ್ಪತ್ರೆಗಳಿಗೆ ಸಾಗಿಸಲು ಹೊಸದಾಗಿ ಆಂಬ್ಯುಲೆನ್ಸ್ ಖರೀದಿಗೆ ಒಪ್ಪಿಗೆ ನೀಡಿ ಎರಡು ವಾರ ಕಳೆದರೂ ಈವರೆಗೂ ಆಂಬ್ಯುಲೆನ್ಸ್ ಖರೀದಿಸಿಲ್ಲ. ಜೊತೆಗೆ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಸೂಕ್ತ ಪ್ರಮಾಣದಲ್ಲಿ ಇನ್ನೂ ಹಾಸಿಗೆಗಳನ್ನು ಒದಗಿಸಿಲ್ಲ. ಏಕೆ ಹೀಗೆ ? ಇದು ಸರಿಯಲ್ಲ ಎಂದು ಯಡಿಯೂರಪ್ಪ, ಸಚಿವರು ಸೇರಿದಂತೆ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News