ಬೆಂಗಳೂರು: ಕೊರೋನ ಸೋಂಕಿಗೆ ಒಂದೇ ದಿನ 56 ಬಲಿ, ಸಾವಿನ ಸಂಖ್ಯೆ 377ಕ್ಕೆ ಏರಿಕೆ

Update: 2020-07-14 16:20 GMT

ಬೆಂಗಳೂರು, ಜು.14: ನಗರದಲ್ಲಿ ಮಂಗಳವಾರ ಒಂದೆ ದಿನ 1,267 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿಗೆ 56 ಮಂದಿ ಮೃತರಾಗಿದ್ದು, 317 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 20,969ಕ್ಕೆ ಏರಿಕೆಯಾಗಿದ್ದು, ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 15,599 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 377 ಜನರು ಸೋಂಕಿಗೆ ಬಲಿಯಾಗಿದ್ದು, ಮಂಗಳವಾರ 664 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 4,992 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 24,350 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ರಿಪೋರ್ಟ್ ಇಲ್ಲದಿದ್ದರೂ ಚಿಕಿತ್ಸೆ ನೀಡಿ

ಕೊರೋನ ರಿಪೋರ್ಟ್ ಇಲ್ಲದಿದ್ದರೂ ಕೊರೋನ ಲಕ್ಷಣಗಳಿದ್ದರೆ ತಕ್ಷಣ ಚಿಕಿತ್ಸೆ ನೀಡುವಂತೆ ರಾಜ್ಯ ಸರಕಾರ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಕೊರೋನ ರೋಗಿ ಎಂದು ಭಾವಿಸಿ ಅವರಿಗೆ ಚಿಕಿತ್ಸೆ ನೀಡಬೇಕು. ಬಳಿಕ ಗಂಟಲು ದ್ರವ ಸಂಗ್ರಹಿಸಿ ಪಾಸಿಟಿವ್ ಬಂದರೆ ಸರಕಾರ ನಿಗದಿಪಡಿಸಿದ ದರವನ್ನೇ ನಿಗದಿ ಮಾಡಬೇಕು. ಬಿಯು ಕೋಡ್ ಜನರೇಟ್ ಆಗದಿದ್ದರೂ ಚಿಕಿತ್ಸೆ ನೀಡಬೇಕು ಎಂದು ಸೂಚನೆ ನೀಡಿದೆ.

ಮೆಟ್ರೋ ಕಾರ್ಮಿಕರಿಗೆ ಕೊರೋನ

ನಾಗವಾರ ಮತ್ತು ಗೊಟ್ಟಿಗೆರೆ ಮಾರ್ಗದಲ್ಲಿ ನಡೆಯುತ್ತಿರುವ 2ನೇ ಹಂತದ ಮೆಟ್ರೊ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಸುಮಾರು 80ಕ್ಕೂ ಅಧಿಕ ಕಾರ್ಮಿಕರಿಗೆ ಕೊರೋನ ಸೋಂಕು ದೃಢವಾಗಿದೆ. ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ 80 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕೂಡಲೇ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.

ಎರಡು ದಿನವಾದರೂ ಶವ ಕೊಡದ ಆಸ್ಪತ್ರೆ: ಆರೋಪ

ಕಳೆದ ಎರಡು ದಿನದ ಹಿಂದೆ ಹೆಬ್ಬಾಳದ ವಿನಾಯಕನಗರದ 70 ವರ್ಷದ ಮಹಿಳೆಯೊಬ್ಬರು ನಗರದ ಆಸ್ಪತ್ರೆಯಲ್ಲಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದರು. ಆದರೆ ಆಸ್ಪತ್ರೆ ಎರಡು ದಿನವಾದರೂ ಶವವನ್ನು ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

"ಎರಡು ದಿನ ಕಳೆದರೂ ಆಸ್ಪತ್ರೆಯಲ್ಲೇ ಮೃತದೇಹ ಇಟ್ಟುಕೊಂಡು ಆಸ್ಪತ್ರೆ ಸಿಬ್ಬಂದಿ ಸತಾಯಿಸುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ತಾಯಿಯ ಶವಸಂಸ್ಕಾರ ಮಾಡಿ, ಇಲ್ಲವೇ ನಮಗೆ ಕೊಡಿ. ಶವ ಇಟ್ಟುಕೊಂಡು ಆಟ ಆಡಬೇಡಿ" ಎಂದು ಮೃತರ ಮಗಳು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ವೈದ್ಯಕೀಯ ಸಿಬ್ಬಂದಿ ನೇಮಕ

ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಬಿಬಿಎಂಪಿ ಆರು ತಿಂಗಳ ಮಟ್ಟಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದೆ.

ವೈದ್ಯರು, ದಂತ ವೈದ್ಯರು, ಆಯುಷ್ ವೈದರು, ಸ್ಟಾಫ್ ನರ್ಸ್, ಸಹಾಯಕ ಸಿಬ್ಬಂದಿ ಹಾಗೂ ನಾಲ್ಕನೇ ದರ್ಜೆ ನೌಕರರುಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟಾರೆ 48 ವೈದ್ಯರು ಹಾಗೂ 187 ಇತರೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಒಟ್ಟಾರೆ ಮಂಗಳವಾರ 235 ಅರ್ಹರಿಗೆ ನೇಮಕಾತಿ ಆದೇಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News