ನಿಯಮ ಉಲ್ಲಂಘನೆ ಆರೋಪ: ಎರಡು ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್

Update: 2020-07-14 16:31 GMT

ಬೆಂಗಳೂರು, ಜು.14: ಕೊರೋನ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊರಡಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ ನಗರದ ಎರಡು ಖಾಸಗಿ ಆಸ್ಪತ್ರೆಗಳ ಓಪಿಡಿಯನ್ನು ಎರಡು ದಿನಗಳ ಮಟ್ಟಿಗೆ ಬಂದ್ ಮಾಡಲು ಸರಕಾರ ಆದೇಶಿಸಿದೆ.

ನಗರದ ವಿಕ್ರಂ ಆಸ್ಪತ್ರೆ ಮತ್ತು ಅಪೋಲೋ ಆಸ್ಪತ್ರೆಗಳ ಓಪಿಡಿಯನ್ನು ಎರಡು ದಿನಗಳ ಕಾಲ ಬಂದ್ ಮಾಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಕುರಿತಂತೆ ಆದೇಶ ಹೊರಡಿಸಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆ ಮತ್ತು ಜಯನಗರದ 3ನೇ ಬ್ಲಾಕ್‍ನಲ್ಲಿರುವ ಅಪೋಲೋ ಆಸ್ಪತ್ರೆ ಸರಕಾರದಿಂದ ಸೂಚಿಸಲ್ಪಟ್ಟ ಕೊರೋನ ಸೋಂಕಿತ ರೋಗಿಗಳ ದಾಖಲಾತಿ ಹಾಗೂ ಚಿಕಿತ್ಸೆಯನ್ನು ನೀಡುತ್ತಿಲ್ಲವೆಂದು ಕಂಡು ಬಂದಿದ್ದು, ಕೆಪಿಎಂಇರ ಕಾಯ್ದೆಯ ಉಲ್ಲಂಘನೆ ಮಾಡಿರುವುದರಿಂದ ತಮ್ಮ ಸಂಸ್ಥೆಯ ಕೆಪಿಎಂಇ ಪರವಾನಗಿಯನ್ನು ರದ್ದುಗೊಳಿಸುವುದು ಸೇರಿದಂತೆ ಕಾಯ್ದೆಯನ್ವಯ ಶಿಸ್ತು ಕ್ರಮ ಜರುಗಿಸಬಾರದೇಕೆ ಎಂಬುದಕ್ಕೆ ಈ ಪತ್ರ ತಲುಪಿದ ಒಂದು ದಿನದೊಳಗೆ ಸಮಜಾಯಿಷಿ ನೀಡಿಲ್ಲ. ಹೀಗಾಗಿ ಈ ಕೂಡಲೇ ತಮ್ಮ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಚಿಕಿತ್ಸೆಯನ್ನು ಎರಡು ದಿನಗಳ ಕಾಲ ನಿಲ್ಲಿಸಲು ಆದೇಶಿಸಿದೆ.

ತಪ್ಪಿದಲ್ಲಿ ಕೆಪಿಎಂಇ ಕಾಯ್ದೆಯ ಉಲ್ಲಂಘನೆ ಮಾಡಿರುವುದರಿಂದ ತಮ್ಮ ಸಂಸ್ಥೆಯ ಕೆಪಿಎಂಇ ಪರವಾನಗಿಯನ್ನು ರದ್ದುಗೊಳಿಸುವುದು ಸೇರಿದಂತೆ ಕಾಯ್ದೆಯ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News