ಅನಧಿಕೃತ ದೇವಸ್ಥಾನ ತೆರವಿಗೆ ವಿರೋಧ: 25 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

Update: 2020-07-14 17:40 GMT

ಬೆಂಗಳೂರು, ಜು.14: ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಅನಧಿಕೃತ ದೇವಸ್ಥಾನಗಳನ್ನು ತೆರವುಗೊಳಿಸದಂತೆ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದ ಭಕ್ತರಿಗೆ ಹೈಕೋರ್ಟ್ 25 ಸಾವಿರ ರೂ.ದಂಡ ವಿಧಿಸಿದೆ.

ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ದೇವಸ್ಥಾನಗಳನ್ನು ತೆರವು ಮಾಡುವಂತೆ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಆ ಹಿನ್ನೆಲೆ ಜಯನಗರದ 4ನೆ ಹಂತದಲ್ಲಿರುವ ಮುನೇಶ್ವರ ದೇವಸ್ಥಾನವನ್ನು ತೆರವು ಮಾಡಲು ಬಿಬಿಎಂಪಿ ಮುಂದಾಗಿತ್ತು. ಆದರೆ, ಸನಾತನ ಕಾಲಕ್ಷೇತ್ರ ಹೆಸರಿನ ಧಾರ್ಮಿಕ ಸಂಸ್ಥೆಯು ಬಿಬಿಎಂಪಿಗೆ ದೇವಸ್ಥಾನವನ್ನು ತೆರವು ಮಾಡದಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ದೇವಸ್ಥಾನ ತೆರವು ಮಾಡದಂತೆ ಕೋರಿ ಆಲ್ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮಧ್ಯಂತರ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ದೇವಸ್ಥಾನ ತೆರವು ಮಾಡದಂತೆ ಕೋರಿ ಅರ್ಜಿ ಸಲ್ಲಿಸಿದ್ದ ಭಕ್ತರನ್ನು ತರಾಟೆಗೆ ತೆಗೆದುಕೊಂಡ ಪೀಠ, ಪಾದಚಾರಿ ಮಾರ್ಗದಲ್ಲಿ ದೇವಸ್ಥಾನ ನಿರ್ಮಿಸಿರುವುದು ತಪ್ಪು. ಹೀಗೆ ಅನಧಿಕೃತವಾಗಿ ನಿರ್ಮಿಸಿರುವ ದೇವಸ್ಥಾನವನ್ನು ತೆರವು ಮಾಡದಂತೆ ಕೋರುವುದು ಅಕ್ರಮಕ್ಕೆ ಬೆಂಬಲ ನೀಡಿದಂತೆ. ಸಂವಿಧಾನದ ವಿಧಿ 25ರ ಪ್ರಕಾರ ಧಾರ್ಮಿಕ ಹಕ್ಕು ಇದೆ ಎಂದ ಮಾತ್ರಕ್ಕೆ ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅವಕಾಶವಿದೆ ಎಂದರ್ಥವಲ್ಲ.

ಅಲ್ಲದೆ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಮಂದಿರ, ಮಸೀದಿ, ಚರ್ಚ್‍ಗಳನ್ನು ನಿರ್ಮಿಸುವಂತಿಲ್ಲ. ಅಲ್ಲದೆ, ದೇವಸ್ಥಾನದ ಪರವಾಗಿ ಭಕ್ತರು ಕೋರ್ಟ್ ಮೆಟ್ಟಿಲೇರಿರುವುದು ಸರಿಯಾದ ನಡವಳಿಕೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ಭಕ್ತರಿಗೆ 25 ಸಾವಿರ ದಂಡ ವಿಧಿಸಿ ಅರ್ಜಿ ವಜಾಗೊಳಿಸಿತು. ಜತೆಗೆ ದಂಡದ ಹಣವನ್ನು ಮುಂದಿನ ಆರು ವಾರಗಳ ಒಳಗೆ ಸಿಎಂ ಕೋವಿಡ್ 19 ಪರಿಹಾರ ನಿಧಿಗೆ ಜಮೆ ಮಾಡಿ ಅದರ ರಸೀದಿಯನ್ನು ಹೈಕೋರ್ಟ್ ಗೆ ಸಲ್ಲಿಸುವಂತೆ ಸೂಚಿಸಿತು. ಅಲ್ಲದೆ, ವಿಚಾರಣೆಯನ್ನು ಜು.30ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News