ಲಾಕ್‍ಡೌನ್: ಅಗತ್ಯ ಸೇವೆ ಹೊರತುಪಡಿಸಿ ಒಂದು ವಾರ ಬಿಎಂಟಿಸಿ ಬಸ್ ಸಂಚಾರ ನಿರ್ಬಂಧ

Update: 2020-07-14 17:55 GMT

ಬೆಂಗಳೂರು, ಜು. 14: ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಜು. 15ರಿಂದ 21ರವರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸಾರಿಗೆ ಸಂಚಾರ ನಿರ್ಬಂಧಿಸಲಾಗಿದೆ.

ಬೆಂಗಳೂರು ನಗರದಲ್ಲಿ ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಅಗತ್ಯ ಸಾರಿಗೆ ಸೇವೆ ಬೆಳಗ್ಗೆ 7ರಿಂದ ಸಂಜೆ 7ಗಂಟೆಯ ವರೆಗೆ ಕಾರ್ಯಾಚರಣೆ ಇರಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು, ಸಾರ್ವಜನಿಕ ಉದ್ದಿಮೆ/ಮಂಡಳಿಗಳ ಹಾಗೂ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಪೊಲೀಸ್, ಗೃಹ ರಕ್ಷಕದಳ ಸೇರಿದಂತೆ ತುರ್ತು ಸೇವೆಗಳ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮೇಲ್ಕಂಡ ಎಲ್ಲ ಸಿಬ್ಬಂದಿ ಪ್ರಯಾಣಕ್ಕೆ ಭಾವಚಿತ್ರ ಇರುವ ಗುರುತಿನ ಚೀಟಿ ಕಡ್ಡಾಯ ಎಂದು ಸೂಚಿಸಲಾಗಿದೆ.

ಪ್ರಯಾಣಿಕರು ಮಾಸಿಕ, ದೈನಂದಿನ ಪಾಸ್ ಹೊಂದಿರಬೇಕು. ಇಲ್ಲವೇ 300 ರೂ.ಮುಖಬೆಲೆಯ ವಾರದ ಅಥವಾ 70 ರೂ.ಗಳ ದೈನಂದಿನ ಪಾಸ್ ಅನ್ನು ನಿರ್ವಾಹಕರಿಂದ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕರ್ತವ್ಯನಿರತ ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು. ಜ್ವರ ಹಾಗೂ ಇತರೆ ಖಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಂತಿಲ್ಲ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News