ಬೆಂಗಳೂರಿನಲ್ಲಿ ಕೋವಿಡ್ ಅಟ್ಟಹಾಸ: ಒಂದೇ ದಿನ 60 ಸಾವು, 1,975 ಮಂದಿಗೆ ಪಾಸಿಟಿವ್

Update: 2020-07-15 16:58 GMT

ಬೆಂಗಳೂರು, ಜು.15: ನಗರದಲ್ಲಿಂದು ಒಂದೇ ದಿನ 1975 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಬುಧವಾರ ಸೋಂಕಿಗೆ 60 ಜನರು ಮೃತರಾಗಿದ್ದು, 317 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 22,944 ಏರಿಕೆಯಾಗಿದ್ದು, ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 17,051 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 437 ಜನರು ಸೋಂಕಿಗೆ ಬಲಿಯಾಗಿದ್ದು, ಬುಧವಾರ 463 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 5,455 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 25,351 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಒಂದೇ ಆಸ್ಪತ್ರೆಯ 17 ಸಿಬ್ಬಂದಿಗೆ ಕೊರೋನ

ನಗರದ ಆಸ್ಪತ್ರೆಯೊಂದರ 17 ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. 5 ವೈದ್ಯರು ಹಾಗೂ 12 ಸಿಬ್ಬಂದಿಗೆ ಕೊರೋನ ಪಾಸಿಟಿವ್ ಬಂದಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.

ಒಮ್ಮೆಲೇ ಇಷ್ಟು ಜನ ವೈದ್ಯಕೀಯ ಸಿಬ್ಬಂದಿಗೆ ಕೊರೋನ ಬಂದಿರುವ ಕಾರಣ ರೋಗಿಗಳು ಪರದಾಡುವಂತಾಗಿದೆ. ಸದ್ಯ ಈ ಆಸ್ಪತ್ರೆಯ ರೋಗಿಗಳನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದ್ದು, ಈವರೆಗೆ ಆಸ್ಪತ್ರೆಯಲ್ಲಿ 35 ಜನರಿಗೆ ಕೊರೋನ ಸೋಂಕು ತಗಲಿದಂತಾಗಿದೆ.

5 ದಿನದ ನಂತರ ಅಂತ್ಯ ಸಂಸ್ಕಾರ

ಮಹಿಳೆ ಮೃತಪಟ್ಟು 5 ದಿನಗಳ ನಂತರ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬುಧವಾರ ನಡೆದಿದೆ ಎನ್ನಲಾಗಿದೆ.

ಪುಲಿಕೇಶಿನಗರದ ವೆಂಕಟೇಶಪುರ ನಿವಾಸಿಯಾಗಿದ್ದ ಮಹಿಳೆಯು ಜ್ವರದಿಂದ ಬಳಲುತ್ತಿದ್ದು, ಜು.10ರಂದು ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜು.11ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹೀಗಾಗಿ ವಿಕ್ಟೋರಿಯಾ ಶವಾಗಾರದಲ್ಲೇ ಮೃತದೇಹ ಇರಿಸಲಾಗಿತ್ತು. ಆದರೆ 5 ದಿನವಾದರೂ ಅವರ ವರದಿ ಬಂದಿಲ್ಲ ಎನ್ನಲಾಗಿದ್ದು, ಬುಧವಾರ ಮೃತ ಮಹಿಳೆಯ ಕುಟುಂಬಸ್ಥರು ಕಾಡಿಬೇಡಿ ಮೃತದೇಹವನ್ನು ಪಡೆದು ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಸಿಬ್ಬಂದಿಗೆ ಮೊದಲ ಆದ್ಯತೆ

ಬಿಬಿಎಂಪಿ ಸಿಬ್ಬಂದಿ ಮತ್ತು ನೌಕರರಿಗೆ ಕೊರೋನ ಬಂದರೆ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ನೀಡಲಾಗುವುದಿಲ್ಲ. ಆದರೆ, ಮೊದಲ ಆದ್ಯತೆಯೊಂದಿಗೆ ಚಿಕಿತ್ಸೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ಆಟೋ ಸಿಗದೇ ಮಹಿಳೆ ಪರದಾಟ

ಲಾಕ್‍ಡೌನ್ ಇದ್ದರೂ ತುರ್ತು ಸಂದರ್ಭದಲ್ಲಿ ಆಟೋ ಸಂಚಾರ ನಡೆಸಬಹುದು ಎಂದಿದ್ದರೂ, ಆಟೋ ಸಿಗದೇ ಕಾರಣ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಗಂಟೆಗಟ್ಟಲೆ ಕಾದು ಕಣ್ಣೀರು ಹಾಕಿದ ಘಟನೆ ಯಶವಂತಪುರದ ಮತ್ತಿಕೆರೆಯಲ್ಲಿ ನಡೆದಿದೆ. 

ಮಹಿಳೆಯೊಬ್ಬರು ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಹೋಗಲು ಗಂಟೆಗಟ್ಟಲೆ ರಸ್ತೆ ಬದಿ ಆಟೋಗಾಗಿ ಕಾದಿದ್ದಾರೆ. ಆ ಮಾರ್ಗವಾಗಿ ಬಂದ ಆಟೋದವರು ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದಾರೆಂದು ನಿರಾಕರಿಸಿದ್ದಾರೆ. ಮತ್ತೊಬ್ಬ ಆಟೋ ಚಾಲಕ 'ಆಸ್ಪತ್ರೆಗೆ ಬಿಟ್ಟು ಮರಳಿ ಬರುವಾಗ ಪೊಲೀಸರು ಆಟೋ ಸೀಝ್ ಮಾಡುತ್ತಾರೆಂಬ' ನೆಪವೊಡ್ಡಿ ನಿರಾಕರಿಸಿದ್ದಾರೆ. ಕೊನೆಗೆ ಸ್ಥಳೀಯರು ಆಟೋ ಚಾಲಕನಿಗೆ ಒಪ್ಪಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News