ಬಿಜೆಪಿ ಅಧಿಕಾರ ತ್ಯಜಿಸಿ ರಾಜ್ಯಪಾಲರ ಆಡಳಿತಕ್ಕೆ ಅನುವು ಮಾಡಿಕೊಡಲಿ: ಡಿ.ಕೆ.ಶಿವಕುಮಾರ್

Update: 2020-07-16 13:31 GMT

ಬೆಂಗಳೂರು, ಜು.16: ಕೊರೋನ ವೈರಸ್‍ನಿಂದ ರಾಜ್ಯವನ್ನು ದೇವರೆ ಕಾಪಾಡಬೇಕೆಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ, ಈ ಸರಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಇರುವುದಕ್ಕೆ ಅರ್ಹತೆಯಿಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ವಿಚಾರದಲ್ಲಿ ಸಚಿವ ಶ್ರೀರಾಮುಲು ಹೇಳಿಕೆ ರಾಜ್ಯ ಸರಕಾರದ ಅಭಿಪ್ರಾಯವಾಗಿದೆ. ಬಹಳ ಶ್ರಮಪಟ್ಟು ಅಧಿಕಾರಕ್ಕೆ ಬಂದ ಬಿಜೆಪಿ, ಕೋವಿಡ್ ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲವೆಂದು ಅಸಹಾಯಕತೆ ಪ್ರದರ್ಶಿಸುತ್ತಿದೆ. ಹೀಗಾಗಿ ಬಿಜೆಪಿ ಸರಕಾರ ಕೂಡಲೇ ಅಧಿಕಾರ ತ್ಯಜಿಸುವ ಮೂಲಕ ರಾಜ್ಯಪಾಲರ ಆಡಳಿತಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಈಗಾಗಲೇ ಬಿಜೆಪಿ ಸರಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ. ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಕಾಂಗ್ರೆಸ್‍ನ ಎಲ್ಲ ನಾಯಕರು, ಕಾರ್ಯಕರ್ತರು ಸಹಕಾರ ಕೊಡುತ್ತಾ ಬಂದಿದ್ದೇವೆ. ಇಷ್ಟಾದರೂ ಸರಕಾರ ಕೋವಿಡ್ ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ ದೇವರೇ ಕಾಪಾಡಬೇಕೆಂದು ಅಸಮರ್ಥತೆಯನ್ನು ಪ್ರದರ್ಶಿಸಿದೆ. ಹೀಗಾಗಿ ರಾಜ್ಯಪಾಲರು ಹಾಗೂ ಅಧಿಕಾರಿಗಳು ಆಡಳಿತ ನಡೆಸಲಿ ಎಂದು ಅವರು ಹೇಳಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಿ ಎಂದರೆ ಬಿಜೆಪಿ ಸಚಿವರು ದೇವರ ಕತೆಗಳನ್ನು ಹೇಳುತ್ತಾರೆ. ದೇವರ ಮೇಲೆ ನಂಬಿಕೆ ಇಡಬೇಡಿ ಎಂದು ಹೇಳುತ್ತಿಲ್ಲ. ಆದರೆ, ರಾಜ್ಯದ ಆಡಳಿತ ವ್ಯವಸ್ಥೆಯನ್ನು ನಿಮಗೆ ವಹಿಸಿದ್ದೇವೆ. ಅದನ್ನು ನಿಭಾಯಿಸಲು ಸಾಧ್ಯವಾಗಿಲ್ಲವೆಂದರೆ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News