ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾಗೆ 5 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

Update: 2020-07-16 13:42 GMT

ಬೆಂಗಳೂರು, ಜು.16: ಪಾದರಾಯನಪುರ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ಹಾಗೂ ಅವರ 21 ಮಂದಿ ಬೆಂಬಲಿಗರಿಗೆ ಹೈಕೋರ್ಟ್ ತಲಾ 5 ಸಾವಿರ ರೂ.ದಂಡವನ್ನು ವಿಧಿಸಿ ಆದೇಶಿಸಿದೆ.

ಹೈಕೋರ್ಟ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯ ಮಾಹಿತಿಯನ್ನು ಇಮ್ರಾನ್ ಪಾಷಾ ಬಹಿರಂಗ ಪಡಿಸದ ಹಿನ್ನೆಲೆ ದಂಡ ವಿಧಿಸಲಾಗಿದೆ. ಇಮ್ರಾನ್ ಪಾಷಾ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್ ಗೂ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಬಾಕಿ ಇರುವಾಗಲೇ ಮತ್ತೊಂದು ಅರ್ಜಿ ಹಾಕಿರುವ ಬಗ್ಗೆ ಸರಕಾರಿ ವಕೀಲ ತೇಜೇಶ್ ಮಾಹಿತಿ ನೀಡಿದರು.

ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಇಮ್ರಾನ್ ಪಾಷಾ ಸೇರಿ 22 ಮಂದಿಗೆ ತಲಾ 5 ಸಾವಿರ ದಂಡ ವಿಧಿಸಿದೆ. ಈ ಹಣವನ್ನ ಪಿಎಂ ಕೋವಿಡ್ ಫಂಡ್‍ಗೆ ನೀಡಲು ಆದೇಶ ನೀಡಿದೆ.

ಇಮ್ರಾನ್ ಪಾಷಾ ಕೊರೋನ ಸೋಂಕಿನಿಂದ ಗುಣಮುಖರಾದ ಮೇಲೆ ಕಾರ್ಯಕರ್ತರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಮೆರವಣಿಗೆ ನಡೆಸಿದ್ದರು. ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇದಾದ ಬಳಿಕ ಜಾಮೀನು ಕೋರಿ ಹೈಕೋರ್ಟ್ ಹಾಗೂ ಎಸಿಎಂಎಂ ಕೋರ್ಟ್‍ಗೆ ಇಮ್ರಾನ್ ಪಾಷಾ ಅರ್ಜಿ ಸಲ್ಲಿಸಿದ್ದರು. ಆದರೆ ಎರಡೂ ಕೋರ್ಟಿನಲ್ಲೂ ಏಕಕಾಲದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News