ಕಂಟೈನ್ಮೆಂಟ್ ಝೋನ್‍ಗಳಲ್ಲಿ ಆಹಾರ ಪೂರೈಕೆಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ: ಹೈಕೋರ್ಟ್

Update: 2020-07-16 15:16 GMT

ಬೆಂಗಳೂರು, ಜು.16: ನಗರದ ಸುಮಾರು 5 ಸಾವಿರ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಆಹಾರ ಸಾಮಗ್ರಿ ಪೂರೈಕೆ ಉಸ್ತುವಾರಿಯಾಗಿ ಜಿ.ಕುಮಾರ್ ನಾಯಕ್ ರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಲೋಕ ಆರಾಧೆ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಆಹಾರದ ಅಗತ್ಯ ಇರುವವರನ್ನು ಗುರುತಿಸಲು ಬಿಬಿಎಂಪಿ ಪ್ರಯತ್ನಿಸಿಲ್ಲ. 25 ಸಾವಿರ ರೇಷನ್ ಕಿಟ್‍ಗಳನ್ನು ವಿತರಿಸುವುದಾಗಿ ಹೇಳುತ್ತೀರಿ. ಅಗತ್ಯವಿರುವ ಜನರನ್ನು ಗುರುತಿಸದೇ ಹೇಗೆ ಹಂಚುತ್ತಿರಿ. ಈ ವಿಚಾರದಲ್ಲಿ ಬಿಬಿಎಂಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಷ್ಟು ದಿನ ಕೊರೋನ ಇದೆ ಎಂಬ ಕಾರಣಕ್ಕೆ ಸುಮ್ಮನೆ ಇದ್ದೆವು. ಅಲ್ಲದೆ, ಬಿಬಿಎಂಪಿಗೆ ಸಮರ್ಪಕ ಕಾರ್ಯವಿಧಾನವೇ ತಿಳಿದಿಲ್ಲ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಆಹಾರ ಸಾಮಗ್ರಿ ವಿತರಣೆ ಮಾಡಲು ಸರಕಾರವೇ ಉಸ್ತುವಾರಿ ಹೊರಬೇಕು. ಉಸ್ತುವಾರಿಯಾಗಿ ಸರಕಾರದ ಹಿರಿಯ ಅಧಿಕಾರಿ ನೇಮಕ ಸೂಕ್ತ ಅನ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು.

ಆಹಾರ ಸಾಮಗ್ರಿ ಪೂರೈಕೆ ಉಸ್ತುವಾರಿಯಾಗಿ ಜಿ.ಕುಮಾರ್ ನಾಯಕ್ ನೇಮಕ ಮಾಡಲಾಗಿದೆ ಎಂದು ಎಎಜಿ ಧ್ಯಾನ್ ಚಿನ್ನಪ್ಪ ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಉಸ್ತುವಾರಿ ವಹಿಸಿಕೊಂಡಿರುವ ಜಿ.ಕುಮಾರ್ ನಾಯಕ್ ಅವರು ಬಿಬಿಎಂಪಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಗತ್ಯವಿರುವವರ ಪಟ್ಟಿ ತಯಾರಿಸಿ ಆಹಾರ ಒದಗಿಸಬೇಕು ಎಂದು ತಿಳಿಸಿ, ಈ ಸಂಬಂಧ ಜು.24ರಂದು ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News