ಶ್ರೀರಾಮುಲು ಹೇಳಿಕೆ ಸರಕಾರದ ವೈಫಲ್ಯದ ಪ್ರತೀಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್

Update: 2020-07-16 16:17 GMT

ಬೆಂಗಳೂರು, ಜು.16: ದೇವರೆ ಕೋವಿಡ್ ಸೋಂಕಿತರನ್ನು ಕಾಪಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ನೀಡಿರುವ ಹೇಳಿಕೆಯು, ರಾಜ್ಯ ಸರಕಾರದ ಅಸಮರ್ಥತೆ ಹಾಗೂ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಶಿಫಾ ಆಸ್ಪತ್ರೆಯ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಸರಕಾರ ವಿಫಲವಾಗಿದ್ದು, ಸೋಂಕಿತರಿಗೆ ಚಿಕಿತ್ಸೆಯನ್ನು ಕೊಡುವುದರಲ್ಲಿಯೂ ವಿಫಲವಾಗಿದೆ. ಹೀಗಿರುವಾಗ ಶ್ರೀರಾಮುಲು ಅವರ ಹೇಳಿಕೆಯು ಸರಕಾರದ ಬೇಜವಾಬ್ದಾರಿತನ ಹಾಗೂ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಅವರು ಕಿಡಿಗಾರಿದರು.

ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಸಚಿವ ಸ್ಥಾನದಲ್ಲಿ ಮುಂದುವರಿಯಲು ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಈ ಕೂಡಲೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಲೀಮ್ ಅಹ್ಮದ್ ಒತ್ತಾಯಿಸಿದರು.

ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಸಂದರ್ಭದಲ್ಲಿ ಶಿಫಾ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಮುಶ್ತಾಕ್ ಅಹ್ಮದ್ ರಶಾದಿ, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಕಾಂಗ್ರೆಸ್ ಮುಖಂಡ ಮೆಹ್ರೋಝ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News