ಕೋವಿಡ್ ನಿಯಂತ್ರಣಕ್ಕೆ ಲಾಕ್‍ಡೌನ್ ಒಂದೇ ಪರಿಹಾರವಲ್ಲ: ಝಮೀರ್ ಅಹ್ಮದ್ ಖಾನ್

Update: 2020-07-16 17:46 GMT

ಬೆಂಗಳೂರು, ಜು.16: ಕೋವಿಡ್ ನಿಯಂತ್ರಣಕ್ಕೆ ಲಾಕ್‍ಡೌನ್ ಒಂದೇ ಪರಿಹಾರವಲ್ಲ. ನಿನ್ನೆ ಲಾಕ್‍ಡೌನ್ ಇದ್ದರೂ ಸರಾಸರಿ ಪ್ರಕರಣಗಳಿಗಿಂತ 800 ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸಾವುಗಳು ಸುಮಾರು 24 ಸಂಭವಿಸಿವೆ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಶಿಫಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಕೋವಿಡ್ ಕೇರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ಸೋಂಕಿತರಿಗೆ ಇವತ್ತು ಸಮರ್ಪಕವಾಗಿ ಚಿಕಿತ್ಸೆ ನೀಡಲು ಸರಕಾರ ಗಮನ ಹರಿಸುತ್ತಿದೆ. ಆದರೆ, ಕೋವಿಡ್ ರಹಿತ ರೋಗಿಗಳು ಇವತ್ತು ಸಮಸ್ಯೆಗೆ ಸಿಲುಕಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಲು ಹೋದರೆ ಕೋವಿಡ್ ಟೆಸ್ಟ್ ವರದಿ ತರುವಂತೆ ಕೇಳಲಾಗುತ್ತಿದೆ. ವರದಿ ಬರಲು ಕನಿಷ್ಠ 48 ಗಂಟೆಗಳು ಬೇಕಾಗುತ್ತದೆ ಎಂದು ಝಮೀರ್ ಅಹ್ಮದ್ ಹೇಳಿದರು.

ಕೋವಿಡ್ ಪರೀಕ್ಷೆಯ ವರದಿ ಆದಷ್ಟು ಶೀಘ್ರದಲ್ಲಿ ಸಿಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲೂ ಈ ವಿಷಯವನ್ನು ತಿಳಿಸಿದ್ದೇನೆ. ಕಳೆದ 15 ದಿನಗಳಲ್ಲಿ 35-40 ವರ್ಷ ವಯೋಮಾನದ ಸುಮಾರು 300 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಲು ಅವಕಾಶ ಸಿಗದೆ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಶಾಸಕ ರಿಝ್ವಾನ್ ಅರ್ಶದ್, ಬೆಂಗಳೂರು ನಗರ ಉತ್ತರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯ್ಯದ್ ಶುಜಾವುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News