ದೇಶದಲ್ಲಿ 10,00,000 ಮೈಲುಗಲ್ಲು ದಾಟಿದ ಕೊರೋನ ಪ್ರಕರಣ!

Update: 2020-07-17 04:09 GMT

ಹೊಸದಿಲ್ಲಿ, ಜು.17: ದೇಶದಲ್ಲಿ ಗುರುವಾರ 36,247 ಹೊಸ ಕೊರೋನ ವೈರಸ್ ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,04,652ಕ್ಕೇರಿದೆ. ಒಂದೇ ದಿನ 690 ಮಂದಿ ಕೊನೆಯುಸಿರೆಳೆಯುವ ಮೂಲಕ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 25,594ಕ್ಕೇರಿದೆ.

ತಜ್ಞರ ಅಭಿಪ್ರಾಯದ ಪ್ರಕಾರ ಮುಂದಿನ 10 ಲಕ್ಷ ಪ್ರಕರಣಗಳು ಒಂದು ತಿಂಗಳ ಒಳಗಾಗಿ (ನಿಖರವಾಗಿ 20.6) ದಿನದಲ್ಲಿ ದಾಖಲಾಗುವ ನಿರೀಕ್ಷೆ ಇದೆ. ಇದೀಗ ಗ್ರಾಮೀಣ ಪ್ರದೇಶಗಳು ಹಾಟ್‌ಸ್ಪಾಟ್‌ಗಳಾಗಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಚಿಕಿತ್ಸಾ ಮೂಲಸೌಕರ್ಯದ ಕೊರತೆ ಇರುವ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.

ದೇಶದಲ್ಲಿ 3,43,268 ಸಕ್ರಿಯ ಪ್ರಕರಣಗಳಿದ್ದು, ಸಾವಿನ ಪ್ರಮಾಣ 2.5%ದಷ್ಟಿದೆ. ಒಟ್ಟು 36.48 ಲಕ್ಷ ಪ್ರಕರಣಗಳು ದಾಖಲಾಗಿರುವ ಅಮೆರಿಕದಲ್ಲಿ 1.40 ಲಕ್ಷ ಮಂದಿ ಮೃತಪಟ್ಟಿದ್ದು, ಸಾವಿನ ಪ್ರಮಾಣ 3.9% ಇದೆ. ಬ್ರೆಝಿಲ್‌ನಲ್ಲಿ 19.78 ಲಕ್ಷ ಪ್ರಕರಣಗಳು ವರದಿಯಾಗಿದ್ದು, 75,697 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಲ್ಲಿ ಸೋಂಕಿತರ ಮರಣ ಪ್ರಮಾಣ 3.8% ಇದೆ.

ದೇಶದಲ್ಲಿ ಸೋಂಕು ಆರಂಭವಾದ ಹಂತದಲ್ಲಿ ಬಿಗಿ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮೊದಲ 10 ಲಕ್ಷ ಪ್ರಕರಣಗಳು ವರದಿಯಾಗಲು 137 ದಿನಗಳು ಬೇಕಾಗಿವೆ. ಐಸೊಲೇಶನ್ ಕೇಂದ್ರಗಳು, ಆಸ್ಪತ್ರೆ ಬೆಡ್‌ಗಳನ್ನು ವ್ಯವಸ್ಥೆಗೊಳಿಸಲು ಹಾಗೂ ಪರೀಕ್ಷಾ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಇದು ಅಮೂಲ್ಯ ಸಮಯವಾಗಿ ಭಾರತಕ್ಕೆ ಸಿಕ್ಕಿದೆ ಎನ್ನುವುದು ತಜ್ಞರ ಅಭಿಮತ. ದೇಶದ ಆರ್ಥಿಕತೆಯ ಮೇಲೆ ದೊಡ್ಡ ಹೊರೆಬಿದ್ದ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಿಂದೀಚೆಗೆ ಅನ್‌ಲಾಕ್ ಪ್ರಕ್ರಿಯೆಯನ್ನು ಭಾರತ ಆರಂಭಿಸಿದ್ದು, ಆಗ ದೇಶದಲ್ಲಿ ವೇಗವಾಗಿ ಸಾಂಕ್ರಾಮಿಕ ಹರಡಲು ಆರಂಭವಾಗಿದೆ.

ಒಂದು ವಾರದ ಹಿಂದೆ ದೇಶದಲ್ಲಿ ಪ್ರತಿದಿನ ಸರಾಸರಿ 23,895 ಪ್ರಕರಣಗಳು ವರದಿಯಾಗಿದ್ದರೆ, ಇದೀಗ ದೈನಿಕ ಸರಾಸರಿ 30,076 ಪ್ರಕರಣಗಳು ಸೇರ್ಪಡೆಯಾಗುತ್ತಿವೆ. ಇದೇ ಪ್ರವೃತ್ತಿ ಮುಂದುವರಿದಲ್ಲಿ ದೇಶದಲ್ಲಿ 2019ರಲ್ಲಿ ದಾಖಲಾದ 24 ಲಕ್ಷ ಕ್ಷಯರೋಗ ಪ್ರಕರಣಗಳ ದಾಖಲೆಯನ್ನು ಕೊರೋನ ಸೋಂಕು ಮುರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News