ನಂಬಿಕೆ ದ್ರೋಹ ಆರೋಪ: 'ಡ್ರೋಣ್ ಪ್ರತಾಪ್' ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು
ಬೆಂಗಳೂರು, ಜು.17: ಡ್ರೋಣ್ ಸಂಶೋಧನೆ ಹೆಸರಿನಲ್ಲಿ ಹಣ ವಸೂಲಿ ಮಾಡಿ, ನಂಬಿಕೆ ದ್ರೋಹ ಮಾಡಿದ್ದ ಆರೋಪಕ್ಕೆ ಗುರಿಯಾಗಿರುವ ಡ್ರೋಣ್ ಪ್ರತಾಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೇಕಬ್ ಜಾರ್ಜ್ ಎಂಬವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಮಂಡ್ಯ ಮೂಲದ ಯುವಕ ಪ್ರತಾಪ್, ತಾನು ಡ್ರೋಣ್ ತಂತ್ರಜ್ಞಾನದ ಸಂಶೋಧಕ, ಹೊಸ ಆವಿಷ್ಕರದಲ್ಲಿ ತೊಡಗಿದ್ದೇನೆ. ಹತ್ತಾರು ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ, ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತನಾಗಿದ್ದೇನೆ ಎಂದೆಲ್ಲಾ ಸುಳ್ಳು ಹೇಳಿಕೊಂಡು ಹಲವು ಗಣ್ಯರು, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಹಣ ಪಡೆದಿರುವ ಮಾಹಿತಿ ಇದೆ ಎಂದು ದೂರಿನಲ್ಲಿ ಜಾರ್ಜ್ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಹಲವು ವರ್ಷಗಳಿಂದ ವಿಜ್ಞಾನಿಗಳ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೈಜ ಸಂಶೋಧನೆಗಳಿಗಾಗಿ ಹಗಲಿರುಳು ಶ್ರಮ ವಹಿಸುತ್ತಿರುವ ವಿಜ್ಞಾನಿಗಳಿಗೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.